ನವದೆಹಲಿ/ಗುವಾಹಟಿ: ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕುಟುಂಬದ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಪಿಪಿಇ ಕಿಟ್ ಡೀಲ್ ಆರೋಪ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು ಪಿಪಿಇ ಕಿಟ್‌ಗಳನ್ನು ಹೆಚ್ಚಿನ ದರದಲ್ಲಿ ಪೂರೈಸಲು ತಮ್ಮ ಪತ್ನಿ ಮತ್ತು ಮಗ ಪಾಲುದಾರಿಕೆ ಹೊಂದಿರುವ ಕಂಪನಿಗಳಿಗೆ ಗುತ್ತಿಗೆ ನೀಡಿದ್ದರು ಎಂದು ಸಿಸೋಡಿಯಾ ದೂರಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಸಿಎಂ ಸಿಸೋಡಿಯಾ, ಪಿಪಿಇ ಕಿಟ್ ಡೀಲ್ ಸಂಬಂಧ ಮಾಧ್ಯಮಗಳ ವರದಿ ಉಲ್ಲೇಖಿಸಿ ಆರೋಪ ಮಾಡಿದ್ದಾರೆ. 2020ರಲ್ಲಿ ಅಸ್ಸೋಂ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಹಿಮಂತ ಬಿಸ್ವಾ ಶರ್ಮಾ ಪಿಪಿಇ ಕಿಟ್‌ಗಳನ್ನು ಹೆಚ್ಚಿನ ದರದಲ್ಲಿ ಪೂರೈಸಲು ತಮ್ಮ ಪತ್ನಿ ಮತ್ತು ಮಗನ ಪಾಲುದಾರ ಕಂಪನಿಗಳಿಗೆ ಗುತ್ತಿಗೆ ಕೊಟ್ಟಿದ್ದರು. ಈ ಕಂಪನಿಗಳು ಪಿಪಿಇ ಕಿಟ್‌ಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪೂರೈಸಿವೆ ಎಂದು ಹೇಳಿದ್ದಾರೆ.
ಆಗ ಇದೇ ಅಸ್ಸೋಂ ಸರ್ಕಾರವು ಇತರ ಕಂಪನಿಗಳಿಂದ ತಲಾ 600 ರೂ.ನಂತೆ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಆದರೆ, ಹಿಮಂತ ಅವರು ತಮ್ಮ ಪತ್ನಿ ಮತ್ತು ಮಗ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳಾದ ಜೆಸಿಬಿ ಇಂಡಸ್ಟ್ರೀಸ್ ಮತ್ತು ಮೆಡಿಟೈಮ್ ಹೆಲ್ತ್‌ಕೇರ್‌ಗೆ ಇದೇ ಪಿಪಿಇ ಕಿಟ್‌ಗಳನ್ನು 990 ರೂ.ಗೆ ತುರ್ತಾಗಿ ಪೂರೈಸುವಂತೆ ಆದೇಶಿಸಿದ್ದರು. ಈ ಮೂಲಕ ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯನ್ನೂ ತಮ್ಮ ಸ್ವಂತಕ್ಕಾಗಿ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.