ಸೇಲಂ (ತಮಿಳುನಾಡು): ಭಾರತ ಮತ್ತು ಚೀನಾದ ನಡುವೆ ಒಂಬತ್ತು ಸುತ್ತಿನ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆ ನಡೆದ ಬಳಿಕ ಪೂರ್ವ ಲಡಾಕ್‌ನಲ್ಲಿ ಭಾರತ ಮತ್ತು ಚೀನಾ ಸೇನೆ ಹಿಂಪಡೆಯುವ ಪ್ರಕ್ರಿಯೆ 'ಪೂರ್ಣಗೊಂಡಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್ನವರು ನಮ್ಮ ಯೋಧರ ಧೈರ್ಯವನ್ನೇ ಅನುಮಾನಿಸುತ್ತಿದ್ದಾರೆ. ದೇಶವು ತನ್ನ ಗಡಿಯಲ್ಲಿ ಯಾವುದೇ ರೀತಿಯ "ಏಕಪಕ್ಷೀಯ ಕ್ರಮ"ಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಮತ್ತು ಅಂತಹ ಪ್ರಯತ್ನಗಳನ್ನು ತಡೆಯಲು ಏನು ಬೇಕಾದರೂ ತೆರಲು ಸಿದ್ಧವಿದೆ ಎಂದು ಭಾರತೀಯ ಜನತಾ ಯುವ ಮೋರ್ಚಾ ರಾಜ್ಯ ಸಮ್ಮೇಳನದಲ್ಲಿ ಹೇಳಿದರು.
ಓದಿ:ಮದುವೆ ಮನೆಯಲ್ಲಿ ಆಹಾರ ಸೇವಿಸಿ 70ಕ್ಕೂ ಅಧಿಕ ಮಂದಿ ಅಸ್ವಸ್ಥ
"ಒಂಬತ್ತು ಸುತ್ತಿನ ಸೇನಾ ಮತ್ತು ರಾಜತಾಂತ್ರಿಕ ಸಂವಾದದ ನಂತರ, ಸೇನೆ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ದುರದೃಷ್ಟವಶಾತ್ ಕಾಂಗ್ರೆಸ್, ಭಾರತೀಯ ಸೇನೆಯ ಶೌರ್ಯವನ್ನು ಅನುಮಾನಿಸುತ್ತಿದೆ. ಇದು ದೇಶಕ್ಕಾಗಿ ಹುತಾತ್ಮರಾಗುತ್ತಿರುವ ಸೈನಿಕರಿಗೆ ಮಾಡುತ್ತಿರುವ ಅವಮಾನವಲ್ಲವೇ" ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರವು "ದೇಶದ ಏಕತೆ, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವದ ವಿಚಾರದಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾವುತ್ತೂ ಹಾಗೆ ಮಾಡುವುದಿಲ್ಲ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.