ನವದೆಹಲಿ:ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಸ್ಯಾಂಡಲ್ವುಡ್ ಬಾದ್ ಶಾ ಕಿಚ್ಚ ಸುದೀಪ್ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ಇದೀಗ ಗಾಯಕ ಸೋನ್ ನಿಗಮ್ ಕೂಡ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ವಾದಕ್ಕೆ ಬೆಂಬಲ ನೀಡಿದ್ದಾರೆ. ಆಯಾ ಭಾಷಿಕರು ಅವರ ಭಾಷೆಯಲ್ಲಿಯೇ ಮಾತನಾಡುವ ಹಕ್ಕು ಹೊಂದಿದ್ದಾರೆ ಎಂದು ಹೇಳುವ ಮೂಲಕ ಅಜಯ್ ದೇವಗನ್ ಹೇಳಿಕೆ ವಿರುದ್ಧ ನಿಂತಿದ್ದಾರೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಸೋನು ನಿಗಮ್ ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿಲ್ಲ. ಅದನ್ನು ಬೇರೆಯವರು ಮಾತನಾಡಬೇಕು ಎಂಬ ಒತ್ತಾಯವೂ ಮಾಡುವಂತಿಲ್ಲ. ಹಿಂದಿ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ ಅಷ್ಟೇ ಎಂದು ಹೇಳಿದ್ದಾರೆ.
ತಮಿಳು ಮತ್ತು ಸಂಸ್ಕೃತ ಪ್ರಪಂಚದ ಹಳೆಯ ಭಾಷೆಯಾಗಿವೆ. ಇದರಲ್ಲಿ ತಮಿಳು ಸಂಸ್ಕೃತಕ್ಕಿಂತಲೂ ಹಳೆಯದ್ದು ಎಂಬ ವಾದವಿದೆ. ಹೀಗಾಗಿ ಭಾಷೆಯ ವಿಷಯಕ್ಕೆ ಕಿತ್ತಾಡುವುದು ಸಲ್ಲದು. ಇಂಗ್ಲಿಷ್ ಅನ್ನು ವ್ಯಾವಹಾರಿಕ ಭಾಷೆಯಾಗಿ ಮಾತನಾಡುತ್ತೇವೆ. ಕೋರ್ಟ್ನ ತೀರ್ಪುಗಳನ್ನು ಕೂಡ ಇಂಗ್ಲಿಷ್ನಲ್ಲಿಯೇ ನೀಡಲಾಗುತ್ತದೆ. ವಿಮಾನದಲ್ಲಿ ಗಗನಸಖಿಯರು ಇಂಗ್ಲಿಷ್ನಲ್ಲೇ ಮಾತನಾಡುತ್ತಾರೆ ಎಂದು ಉದಾಹರಣೆ ನೀಡಿದ್ದಾರೆ.
ಆಯಾ ಭಾಷಿಕರಿಗೆ ತಮ್ಮ ಮಾತೃಭಾಷೆಗಳಲ್ಲಿ ಮಾತನಾಡುವ ಹಕ್ಕಿದೆ. ಹಿಂದಿಯನ್ನು ಅವರ ಮೇಲೆ ಹೇರಲು ಸಾಧ್ಯವಿಲ್ಲ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದಲ್ಲಿ ಭಾಷಾ ವಿವಾದವು ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಇದನ್ನೆಲ್ಲಾ ಬೆಳೆಸಬೇಡಿ ಎಂದು ಪರೋಕ್ಷವಾಗಿ ಅಜಯ್ ದೇವಗನ್ಗೆ ಬುದ್ಧಿವಾದ ಹೇಳಿದ್ದಾರೆ.
ಓದಿ:ಬಸವಣ್ಣನ ವಚನ, ಆದರ್ಶ ಪಾಲಿಸಿ ಅವರಂತೆ ಜೀವನ ಮಾಡಬೇಕು: ಅಮಿತ್ ಶಾ