ಡೆಹ್ರಾಡೂನ್(ಉತ್ತರಾಖಂಡ) ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಡಾ.ಧವಲ್ ಕಣ್ವಾಸಿ ಅವರು ಉತ್ತಮ ವೈದ್ಯ ಜತೆಗೆ ಗಾಯಕ ಕೂಡ. ಸಂಗೀತದ ಮೂಲಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬಹುದು ಎಂಬುದು ಅವರ ನಂಬಿಕೆ. ಸಂಗೀತವು ದೇಹದ ವ್ಯವಸ್ಥೆಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ. ಅದಕ್ಕಾಗಿಯೇ ಇವರು ರೋಗಿಗಳಿಗೆ ಔಷಧದ ಜೊತೆಗೆ ಸಂಗೀತದ ಮೂಲಕ ಚಿಕಿತ್ಸೆ ನೀಡುತ್ತಾರೆ. ಹಿರಿಯ ವೈದ್ಯರು ಕೂಡ ಡಾ.ಕಣ್ವಾಸಿ ಅವರ ಕೌಶಲ್ಯವನ್ನು ಕೊಂಡಾಡುತ್ತಿದ್ದಾರೆ.
ತಾಯಿಯೇ ಪ್ರೇರಣೆ:ಡಾ.ಧವಳ್ ಕಣ್ವಾಸಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ತಂದೆ ಜಗಜೀಶ್ ಸಿಂಗ್ ಕಣ್ವಾಸಿ. ಚಮೋಲಿ ಜಿಲ್ಲೆಯ ಗೋಚಾರ್ ನಿವಾಸಿ. ತಾಯಿ ಪುಷ್ಪಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಹೊಂದಿದ್ದ ಇವರಿಗೆ ಹಾಡಲು ತಾಯಿಯೇ ಪ್ರೇರಣೆಯಂತೆ.
ಸಂಸ್ಕೃತದಲ್ಲೂ ಪಾಂಡಿತ್ಯ: ಡಾ.ಧವಳ್ ಅವರು ಸಂಸ್ಕೃತದಲ್ಲೂ ಪಾಂಡಿತ್ಯವನ್ನು ಪಡೆದಿದ್ದಾರೆ. ಅಖಿಲ ಭಾರತ ಸಂಸ್ಕೃತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಹಾಡುವ ಜತೆಗೆ ರೋಗಿಗಳ ಸೇವೆ ಮಾಡುತ್ತಿರುವ ಇವರ ಕಾರ್ಯಕ್ಕೆ ಹಿರಿಯ ವೈದ್ಯರು ಸಹ ಸಾಥ್ ನೀಡುತ್ತಾರೆ. ಆಸ್ಪತ್ರೆಯ ಹಿರಿಯ ವೈದ್ಯರು ಯಾವಾಗಲೂ ತಮ್ಮ ಮನೋಬಲವನ್ನು ಹೆಚ್ಚಿಸುತ್ತಾರಂತೆ ಎಂದು ಡಾ.ಧವಳ್ ಹೇಳಿದ್ದಾರೆ.
ಹಿರಿಯ ವೈದ್ಯರು ಸಾಥ್:ಮತ್ತೊಂದೆಡೆ, ಕಾರೊನೇಷನ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಡಿ.ಪಿ.ಜೋಶಿ ಡಾ.ಕಣ್ವಾಸಿ ಅವರನ್ನು ಕೊಂಡಾಡಿದ್ದಾರೆ. ಆಸ್ಪತ್ರೆಯ ಒಪಿಡಿ ಹಾಗೂ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಪೂರ್ಣ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಲು ಡಾ.ಕಣ್ವಾಸಿ ಸದಾ ಸಿದ್ಧ. ವಿಶೇಷವಾಗಿ ಕ್ರಿಟಿಕಲ್ ಕೇರ್ ರೋಗಿಗಳ ಸೇವೆಯಲ್ಲಿ ಯಾವಾಗಲೂ ಸಮರ್ಪಿತ. ಹಾಡುವ ಹವ್ಯಾಸವನ್ನೂ ಅವರು ಜೀವಂತವಾಗಿಟ್ಟಿದ್ದಾರೆ.