ಭುವನೇಶ್ವರ:ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನ ಮತ್ತು ಹತ್ತಿರದ ಕಾಡುಗಳಲ್ಲಿ ಹದಿನೈದು ದಿನಗಳಿಂದ ಉಲ್ಬಣಗೊಳ್ಳುತ್ತಿರುವ ಕಾಳ್ಗಿಚ್ಚು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಒಡಿಶಾ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಹೇಳಿದೆ.
ರಾಷ್ಟ್ರೀಯ ಉದ್ಯಾನದ ಕೆಲವು ಭಾಗಗಳಲ್ಲಿ ಬುಧವಾರ ಮಳೆಯಾಗಿದೆ. ಇದರಿಂದ ಬೆಂಕಿ ಮತ್ತಷ್ಟು ಹರಡದಂತೆ ತಡೆಯಲಾಗುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಟಾಸ್ಕ್ ಫೋರ್ಸ್ ಮುಖ್ಯಸ್ಥರಾದ ಸಂದೀಪ್ ತ್ರಿಪಾಠಿ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಯೂರ್‌ಭಂಜ್ ಜಿಲ್ಲೆಯ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನ ಮತ್ತು ಅದರ ಸಮೀಪವಿರುವ ಅರಣ್ಯ ಪ್ರದೇಶಗಳ ಮೂಲಕ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ವನ್ಯಜೀವಿಗಳು ಮತ್ತು ಪರಿಸರ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.
ಪ್ರತಿಪಕ್ಷದ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯ ಸರ್ಕಾರದ ಮುಂಚನೇ ಕ್ರಮ ಕೈಗೊಂಡಿದ್ದರೆ ಬೆಂಕಿ ಇಷ್ಟು ದೊಡ್ಡ ಪ್ರಮಾಣ ಪಡೆದುಕೊಳ್ಳುತ್ತಿರಲಿಲ್ಲ ಎಂದು ಬಜೆಟ್ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿತು.
ಕಾಡಿನ ಬೆಂಕಿ ನಂದಿಸಲು ಅಸಮರ್ಪಕ ನಿರ್ಣಯಗಳ ಕೈಗೊಂಡ ರಾಜ್ಯ ಸರ್ಕಾರ ಕ್ಷಮೆಯಾಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಿದ್ದರೆ ಅನೇಕ ಅಮೂಲ್ಯ ವನ್ಯಜೀವಿಗಳು ಮತ್ತು ಔಷಧೀಯ ಸಸ್ಯಗಳನ್ನು ಉಳಿಸಬಹುದಿತ್ತು. ನಾವು ಇಂದಿನ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಸ್. ಸಲೂಜಾ ಹೇಳಿದರು.
ಅರಣ್ಯನಾಶದ ಪುರಾವೆಗಳನ್ನು ಅಳಿಸಲು ಉದ್ಯಾನವನಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ವಿಪ್ ಮೋಹನ್ ಮಾಂಜಿ ಆರೋಪಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವನ್ಯಜೀವಿಗಳು ಮತ್ತು ಮನುಷ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತಾರೂಢಿ ಬಿಜೆಡಿ ಹೇಳಿದೆ.