ನವದೆಹಲಿ:ಟೆಲಿಕಾಂ ಕ್ಷೇತ್ರದಲ್ಲಿ ಎರಡು ಮಹತ್ತರ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಗುರುವಾರ ಜಾರಿಗೊಳಿಸಿದೆ. ಸಿಮ್ ವಿತರಕರ ಕಡ್ಡಾಯ ಪೊಲೀಸ್ ಪರಿಶೀಲನೆ ಮತ್ತು ದೊಡ್ಡ ಪ್ರಮಾಣದಲ್ಲಿ ಒಬ್ಬರಿಗೇ ಸಿಮ್ ಸಂಪರ್ಕ ನೀಡುವುದನ್ನು ಸ್ಥಗಿತಗೊಳಿಸಿರುವುದು ಕೇಂದ್ರ ಸರ್ಕಾರ ಕೈಗೊಂಡ ಹೊಸ ಕ್ರಮಗಳಾಗಿವೆ. ಡಿಜಿಟಲ್ ಆರ್ಥಿಕತೆಯ ಈ ಸಮಯದಲ್ಲಿ ಮೊಬೈಲ್ ಚಂದಾದಾರರನ್ನು ವಂಚನೆಯಿಂದ ರಕ್ಷಿಸುವ ಸಲುವಾಗಿ ಸರ್ಕಾರ ಈ ಕ್ರಮಗಳಿಗೆ ಮುಂದಾಗಿದೆ.
"ನಾವು ಬಳಕೆದಾರರ ರಕ್ಷಣೆಯ ಬಗ್ಗೆ ಮಾತ್ರ ಗಮನ ಹರಿಸಿದ್ದೇವೆ" ಎಂದು ಕೇಂದ್ರ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ಈ ಸುಧಾರಣೆಗಳು ಸಂಪೂರ್ಣವಾಗಿ ಬಳಕೆದಾರರ ರಕ್ಷಣೆಯ ಮೇಲೆ ಕೇಂದ್ರೀಕರಿಸಿವೆ ಮತ್ತು ಸೈಬರ್ ವಂಚನೆಗಳನ್ನು ಕಡಿಮೆ ಮಾಡುವತ್ತ ಪ್ರಮುಖ ಹೆಜ್ಜೆಯಾಗಿವೆ" ಎಂದು ಅವರು ಹೇಳಿದರು.
ಮೇ ತಿಂಗಳಲ್ಲಿ ಸಂಚಾರ್ ಸಾಥಿ ಪೋರ್ಟಲ್ ಅನ್ನು ಪ್ರಾರಂಭಿಸಿದ ನಂತರ, ನಕಲಿ ದಾಖಲೆಗಳನ್ನು ಬಳಸಿಕೊಂಡು ಪಡೆಯಲಾದ 52 ಲಕ್ಷ ಸಂಪರ್ಕಗಳನ್ನು ದೂರಸಂಪರ್ಕ ಇಲಾಖೆ ಪತ್ತೆ ಹಚ್ಚಿದೆ ಮತ್ತು ನಿಷ್ಕ್ರಿಯಗೊಳಿಸಿದೆ. 67,000 ಸಿಮ್ ವಿತರಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು 300 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಇದಲ್ಲದೆ, ಕಳ್ಳತನವಾಗಿದೆ ಎಂದು ವರದಿಯಾದ ಅಥವಾ ಮೋಸದಿಂದ ಪಡೆದ 17,000 ಹ್ಯಾಂಡ್ಸೆಟ್ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಅವರು ಹೇಳಿದರು.
ಸಾಮೂಹಿಕ ಸ್ಪ್ಯಾಮಿಂಗ್ ಘಟನೆಗಳ ನಂತರ 66,000 ವಾಟ್ಸ್‌ಆ್ಯಪ್ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ. ಹೆಚ್ಚುವರಿಯಾಗಿ, ವಂಚನೆಯ ಪಾವತಿ ವಹಿವಾಟುಗಳಿಗೆ ಬಳಸಲಾಗುತ್ತಿದ್ದ 8 ಲಕ್ಷ ಪೇಮೆಂಟ್ ವ್ಯಾಲೆಟ್ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಸಂಚಾರ್ ಸಾಥಿ ಪೋರ್ಟಲ್ ಸಹಾಯದಿಂದ 3 ಲಕ್ಷ ಹ್ಯಾಂಡ್ಸೆಟ್ಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು ಅವನ್ನು ಆಯಾ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸರ್ಕಾರ ಕೈಗೊಳ್ಳುತ್ತಿರುವ ಈ ಪೂರ್ವಭಾವಿ ಕ್ರಮಗಳ ನಂತರ ಒಂದು ವರ್ಷದೊಳಗೆ ಸೈಬರ್ ವಂಚನೆಯ ಘಟನೆಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.