ಉತ್ತರಕಾಶಿ(ಉತ್ತರಾಖಂಡ):ಕಳೆದ 16 ದಿನಗಳಿಂದ ಸಿಲ್ಕ್ಯಾರಾ ಸುರಂಗದ ಒಳಗಡೆ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ತಜ್ಞರು ಬಹು ವಿಧದ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಒಟ್ಟು 19.2 ಮೀಟರ್ ವರ್ಟಿಕಲ್ ಡ್ರಿಲ್ಲಿಂಗ್ (ಲಂಬವಾಗಿ ಭೂಮಿಯನ್ನು ಕೊರೆಯುವುದು) ಕೆಲಸ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್‌ಹೆಚ್‌ಐಡಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಅಹ್ಮದ್ ಹೇಳಿದ್ದಾರೆ.
"ನಾವು ಸುಮಾರು 19.2 ಮೀಟರ್ ಕೊರೆಯುವ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ನವೆಂಬರ್ 30ರೊಳಗೆ ಅಂದರೆ ಮುಂದಿನ ನಾಲ್ಕು ದಿನಗಳಲ್ಲಿ ಸುಮಾರು 86 ಮೀಟರ್ ಕೊರೆಯಬೇಕಿದೆ. ಮತ್ತೆ ಕಾರ್ಯಾಚರಣೆಗೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲಾಗುವುದು" ಎಂದರು.
ಉತ್ತರಾಖಂಡ ಸರ್ಕಾರದ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್ ಅವರು, "ಸುರಂಗದೊಳಗೆ ಸಿಲುಕಿರುವ ಆಗರ್ ಯಂತ್ರವನ್ನು ತೆಗೆಯುವ ಕಾರ್ಯವನ್ನು ವೇಗಗೊಳಿಸಲಾಗಿದೆ. ಪ್ಲಾಸ್ಮಾ ಕತ್ತರಿಸುವ ಯಂತ್ರಗಳು ಮತ್ತು ಇತರೆ ಯಂತ್ರಗಳು ಬಂದ ನಂತರ ಕೆಲಸವು ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಆಗರ್ ಯಂತ್ರವನ್ನು ತೆಗೆಯುವ ಕಾರ್ಯಾಚರಣೆಗೆ ಇಲ್ಲಿಯವರೆಗೆ ಯಾವುದೇ ಅಡಚಣೆ ಉಂಟಾಗಿಲ್ಲ, ಆದರೆ, ಅದನ್ನು ಹೊರ ತೆಗೆದುಹಾಕಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಗರ್ ಯಂತ್ರ ತೆರವುಗೊಳಿಸಿದ ನಂತರ ನಾವು ಒಳಗೆ ಮ್ಯಾನ್ಯುವಲ್ ಡ್ರಿಲ್ಲಿಂಗ್ ಮಾಡುತ್ತೇವೆ. ಸೇನೆಯ ಇಂಜಿನಿಯರಿಂಗ್ ರೆಜಿಮೆಂಟ್ ಮುಂದೆ ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ಯೋಜನೆಯನ್ನು ಸಿದ್ಧಪಡಿಸುತ್ತದೆ" ಎಂದರು.
"41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವುದು ನಮ್ಮ ಮೊದಲ ಗುರಿ. ಸುಮಾರು 70-80 ಮೀಟರ್‌ವರೆಗೆ 8 ಇಂಚಿನ ಪೈಪ್‌ಲೈನ್ ಕೊರೆದು ಸ್ಥಗಿತಗೊಳಿಸಲಾಗಿದೆ. 1.2 ಮೀಟರ್ ವ್ಯಾಸದ ಪೈಪ್‌ಲೈನ್ ಅನ್ನು ಸುಮಾರು 20 ಮೀಟರ್‌ಗೆ ಕೊರೆಯಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.