ಬೆಂಗಳೂರು:ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ಪಡೆದಿರುವ ಕರುನಾಡಿನ ಹೆಮ್ಮೆಯ ಬೆಂಗಳೂರನ್ನು(Bengaluru) ಭಾರತದ ಸಿಲಿಕಾನ್ ವ್ಯಾಲಿ(Silicon Valley) ಎಂದೇ ಕರೆಯಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಬ್ ಆಗಿರುವುದರಿಂದ ರಾಜಧಾನಿಗೆ ಸಿಲಿಕಾನ್ ವ್ಯಾಲಿ ಎಂಬ ಹೆಸರು ಬಂದಿದೆ.
ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಸಿಲಿಕಾನ್ ವ್ಯಾಲಿ ಎಂಬ ಬಿರುದಿಗೆ ಪರ್ಯಾಯ ಹೆಸರಿಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗ್ತಿತ್ತು. ಸಿಲಿಕಾನ್ ವ್ಯಾಲಿಯ ಬದಲಾಗಿ ಬೆಂಗಳೂರಿಗೆ ಬೇರೆ ಹೆಸರಿಟ್ಟರೆ ಹೇಗೆ..? ಯಾರಾದರು ಸೂಕ್ತ ಹೆಸರು ಸೂಚಿಸಿ, 48 ಗಂಟೆಗಳ ಒಳಗಾಗಿ ಬರುವ ಎಲ್ಲಾ ಹೆಸರುಗಳನ್ನು ಪರಿಗಣಿಸಲಾಗುವುದು ಎಂದು ಮಹೀಂದ್ರಾ ಗ್ರೂಪ್ ಚೇರ್ಮ್ಯಾನ್ ಆನಂದ್ ಮಹೀಂದ್ರಾ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದರು.
ಆನಂದ್ ಮಹೀಂದ್ರಾ ಅವರ ಟ್ವೀಟ್ಗೆ ಅನೇಕರು ಪ್ರತಿಕ್ರಿಯಿಸಿ, ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಹಲವು ಹೆಸರುಗಳನ್ನು ಸೂಚಿಸಿದ್ದರು. ಈ ಪೈಕಿ ಕೆಲ ಹೆಸರುಗಳನ್ನು ಪರಿಗಣಿಸಿದ ಆನಂದ್ ಮಹೀಂದ್ರಾ, ಕೊನೆಯದಾಗಿ ಹೊಸ ಹೆಸರು ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, "ಕನ್ನಡದಲ್ಲಿ ಹಳ್ಳಿ ಅಂದರೆ ಗ್ರಾಮ, ಟೆಕ್ಹಳ್ಳಿ ಅಂದರೆ ತಂತ್ರಜ್ಞಾನದ ಗ್ರಾಮ ಎಂದರ್ಥ. TecHalli ಎನ್ನುವ ಈ ಇಂಗ್ಲಿಷ್ ಪದದಲ್ಲಿ ಮಧ್ಯದ H ಅಕ್ಷರವನ್ನು ಎರಡೂ ಪದಗಳಿಗೆ ಹೊಂದಿಕೆಯಾಗುವಂತೆ ಬಳಸಲಾಗಿದೆ. ಈ ಪದ ಸೂಚಿಸಿದವರು ಶ್ರೀನಿವಾಸ್ ಪಿ.ರೆಡ್ಡಿ ಎಂಬವರು. ಹಲವರು ಸೂಚಿಸಿದ್ದ ನಾನಾ ಬಗೆಯ ಹೆಸರುಗಳಲ್ಲಿ ಒಟ್ಟು 4 ಅನ್ನು ಫೈನಲ್ ಲಿಸ್ಟ್ ಮಾಡಲಾಗಿದೆ. ಆ ಪೈಕಿ ಕೊನೆಯದಾಗಿ ಟೆಕ್ ಹಳ್ಳಿ ಎಂಬ ಹೆಸರನ್ನು ನಾನು ಮತ್ತು ನಂದನ್ ನಿಲೇಕಣಿ ಸೂಕ್ತ ಅಂತಿಮ ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಆನಂದ್ ಮಹೀಂದ್ರಾ ಟ್ವೀಟ್ಗೆ ರಿಪ್ಲೈ ಮಾಡಿದ ಓರ್ವ ಬಳಕೆದಾರ, ಟೆಕ್ಹಳ್ಳಿ ಅನ್ನುವುದು ಕನ್ನಡ ಪದವಾಗಿರುವುದರಿಂದ ಕನ್ನಡ ಬಲ್ಲವರಿಗೆ ಹೊರತು ಇನ್ಯಾರಿಗೂ ಅರ್ಥವಾಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಟೆಕ್ಹಳ್ಳಿ ಎಂಬುವುದು ಯಾರಿಗೂ ಅರ್ಥವಾಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ, ಇದು ಅರ್ಥವಾಗಲು ಸ್ವಲ್ಪ ಸಮಯ ಬೇಕಾಗಬಹುದು. ಜಗತ್ತಿನ ಎಲ್ಲಾ ಕಡೆ ಇಂಗ್ಲಿಷ್ ಮಾತನಾಡುವುದಿಲ್ಲ, ಹಾಗಾಗಿ ಸಿಲಿಕಾನ್ ವ್ಯಾಲಿ ಎಂಬ ಹೆಸರೂ ಎಲ್ಲರಿಗೆ ಅರ್ಥವಾಗುವುದಿಲ್ಲ ಎಂದಿದ್ದಾರೆ.
ಇನ್ನು ಯಾರಾದರೂ ಸೂಚಿಸಿದ ಹೆಸರು ಆಯ್ಕೆಯಾದರೆ ಅವರಿಗೆ Pininfarina H2 Speed ಹೈಡ್ರೋಜನ್ ರೇಸ್ ಕಾರಿನ ಪ್ರತಿಕ್ರಿತಿ ಬಹುಮಾನವಾಗಿ ಸಿಗಲಿದೆ ಎಂದು ಮಹೀಂದ್ರಾ ಹೇಳಿದ್ದರು. ಕೊಟ್ಟ ಮಾತಿನಂತೆ ಶ್ರೀನಿವಾಸ್ ಪಿ.ರೆಡ್ಡಿಯವರಿಗೆ ವಿಳಾಸ ಕಳಿಸಿಕೊಡಲು ಹೇಳಿದ್ದಾರೆ.
ಇದನ್ನೂಓದಿ : 'ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ' ಥ್ರಿಲ್ಲಾಗಿಲ್ಲ: ಬೆಸ್ಟ್ ಹೆಸರು ಕೊಟ್ಟವರಿಗೆ ’ಮಹೀಂದ್ರಾ’ ಅಚ್ಚರಿಯ ಗಿಫ್ಟ್!