ಹಸಿವು ಜೀವನದ ಅತಿ ದೊಡ್ಡ ಶಿಕ್ಷಕ ಎಂಬ ಮಾತಿದೆ. ಅಂತಹ ಹಸಿವೆ ಈ ಮಹಿಳೆಯ ಜೀವನಕ್ಕೆ ತಿರುವು ನೀಡಿದೆ, ಅನೇಕರ ಪಾಲಿಗೆ ಆಶ್ರಯ ನೀಡುವಂತೆ ಪ್ರೇರೇಪಿಸಿದೆ. ಇದು ಚಂದ್ರಕಲಾ ಎಂಬ 37 ವರ್ಷದ ಮಹಿಳೆಯ ಯಶೋಗಾಥೆ. ಹಸಿವನ್ನು ತಾಳಲಾಗದೇ ಒಂದು ತಿಂಗಳ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ಚಂದ್ರಕಲಾ ಇಂದು 10 ಮಂದಿಗೆ ಉದ್ಯೋಗ ನೀಡಿದ್ದಾರೆ. ಈ ಕುರಿತು ಈಟಿವಿ ಭಾರತ್‌ನೊಂದಿಗೆ ಅವರು ಮನದಾಳ ಹೇಳಿಕೊಂಡರು.
"ನಮ್ಮದು ಸುತ್ತಲೂ ಹಸಿರು ಬೆಟ್ಟಗುಡ್ಡಗಳಿಂದ ಸುತ್ತುವರೆದ ಸಿಕ್ಕಿಂನ ರೋರ್ಟಾಂಗ್ ಸಮೀಪದ ಸಣ್ಣ ಗ್ರಾಮ. ಕೇವಲ 200 ಮನೆಗಳಿದ್ದ ಈ ಗ್ರಾಮಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ನನ್ನ ಪೋಷಕರು ನನಗೆ ಯಾವುದೇ ನೋವಾಗದಂತೆ ಬೆಳೆಸಿದರು. 10ನೇ ತರಗತಿ ಓದುತ್ತಿದ್ದ ನನ್ನನ್ನು ಪೂರ್ನರೈ ಎಂಬ ಎಲೆಕ್ಟ್ರಿಷಿಯನ್ಗೆ ಕೊಟ್ಟು ಮದುವೆ ಮಾಡಿದರು. ಇದಾದ ಬಳಿಕವೇ ನನಗೆ ಕಷ್ಟ ಏನೆಂಬುದರ ಪರಿಚಯ ಆಯಿತು. ಕಟ್ಟಿಕೊಂಡ ಗಂಡ ಮನೆ ನಿರ್ವಹಣೆಗೆ ಬಿಡಿಗಾಸೂ ನೀಡುತ್ತಿರುಲಿಲ್ಲ. ಇಂತಹ ಸಂದರ್ಭದಲ್ಲೇ ನಾನು ಗರ್ಭಿಣಿ ಆದೆ. ಮಗು ಹುಟ್ಟಿದ ಮೇಲೆ ಪರಿಸ್ಥಿತಿ ಬದಲಾಗುತ್ತದೆ ಎಂದು ಭಾವಿಸಿದೆ. ಆದರೆ, ಕೊಂಚವೂ ಬದಲಾಗಲಿಲ್ಲ. ಈ ಯಾವುದೇ ವಿಷಯವನ್ನು ನಾನು ನನ್ನ ಪೋಷಕರಿಗೆ ತಿಳಿಸಲಿಲ್ಲ".
ಹಸಿವು ಕಲಿಸಿತು ಪಾಠ: "ಆತ ಕುಟುಂಬಕ್ಕೆ ಸಹಾಯ ಮಾಡುತ್ತಾನೆ ಎಂಬ ಎಲ್ಲಾ ಭರವಸೆಗಳನ್ನು ಬಿಟ್ಟುಬಿಟ್ಟೆ. ಹಸಿವಿನಿಂದ ದಿನಗಳೆಯುತ್ತಿದ್ದ ಸಮಯದಲ್ಲಿ ನನ್ನ ಪುಟ್ಟ ಕಂದಮ್ಮಗಳಿಗಾಗಿ ಉದ್ಯೋಗ ಹುಡುಕುವಂತಾಯಿತು. ಹಸಿವಿನಿಂದ ಇರುವುದಕ್ಕಿಂತ ಕೆಲಸಕ್ಕೆ ಹೋಗುವುದು ಉತ್ತಮ ಎಂದು ನಿರ್ಧರಿಸಿದೆ. ಆದರೆ, ಕೆಲಸಕ್ಕೆ ಹೋಗಲು ನಾನು ಹೊಂದಿದ್ದು ಕನಿಷ್ಠ ವಿದ್ಯಾರ್ಹತೆ. ಹೀಗಾಗಿ ಕಟ್ಟಡ ಕಟ್ಟುವ ಕಾರ್ಮಿಕ ವೃತ್ತಿಗೆ ಸೇರಿದೆ. ಒಂದು ತಿಂಗಳ ಹಸುಗೂಸನ್ನು ಹಿಡಿದುಕೊಂಡ ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದೆ."
"ಕೆಲಸ ಮಾಡುತ್ತಿದ್ದಾಗ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಕೆಲಸ ಇಲ್ಲದಾಗ ಮಗು ನಾನು ಹಸಿವೆಯಿಂದ ಮಲಗಬೇಕಿತ್ತು. ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ನನಗೊಂದು ಆಲೋಚನೆ ಹೊಳೆಯಿತು. ಇಲ್ಲಿನ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನಮ್ಮ ಪ್ರದೇಶದ ವಿಶೇಷವಾಗಿರುವ ಅಡುಗೆ ಮಾಡಿ ಮಾರುವ ಯೋಚನೆಯಾಯಿತು. ಇದಕ್ಕಾಗಿ ಕೂಡ ನನಗೆ ಕೊಂಚ ಬಂಡವಾಳವೂ ಬೇಕಿತ್ತು. ನನ್ನ ಕಷ್ಟ ಗೊತ್ತಿದ್ದವರ ಬಳಿ ಈ ಐಡಿಯಾ ತಿಳಿಸಿದೆ. ಅವರು ನನಗೆ ಸ್ವ ಸಹಾಯ ಗುಂಪಿಗೆ ಸೇರುವಂತೆ ಹೇಳಿದರು. ಅದರಂತೆ ನಾನು 10 ಸಾವಿರ ರೂ ಸಾಲ ಪಡೆದೆ. ಅದರ ಸಹಾಯದಿಂದ ನಾನು ಮೋಮೋ ಆಹಾರ ಮಾಡಿ ಮಾರಲು ಸಿದ್ದಳಾದೆ."
ಅಮ್ಮನೇ ನನಗೆ ಸ್ಪೂರ್ತಿ: "ಅಮ್ಮನಿಂದ ಮೋಮೋ ಕಲಿತಿದ್ದು ನನಗೆ ನೆರವಾಯಿತು. ಇದರ ಜೊತೆಗೆ ಥಾಯ್ನ ವಿಶೇಷ ಕಾಫಿ ಮತ್ತು ಟೀ ಗಳನ್ನೂ ನೀಡಲು ಪ್ರಾರಂಭಿಸಿದೆ. ಪ್ರವಾಸಿಗರ ಸೀಸನ್ ಇಲ್ಲದಾಗ ಕೆಲಸಕ್ಕೆ ಹೋಗಲು ಶುರುವಿಟ್ಟುಕೊಂಡೆ. ಆ ಸಂದರ್ಭದಲ್ಲಿ ಕೂಡ ನನಗೆ ಕೆಲಸ ಸಿಗುತ್ತಿರಲಿಲ್ಲ. ಆರ್ಥಿಕವಾಗಿ ಮಕ್ಕಳನ್ನು ಬೆಳೆಸಲು ತುಂಬಾ ಕಷ್ಟಪಟ್ಟೆ. ನನ್ನ ತಾಯಿ ಇಬ್ಬರು ಒಟ್ಟಿಗೆ ಎದ್ದುನಿಂತು ಕಷ್ಟ ಎದುರಿಸೋಣ ಎಂಬ ಭರವಸೆ ನೀಡಿದಳು."