ನವದೆಹಲಿ:ನಿಷೇಧಿತ ಸಿಖ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಹಾಗೂ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಎಂಬಾತನ ಹೊಸ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ನವೆಂಬರ್ 19 ರಂದು (ವಿಶ್ವಕಪ್ ಕ್ರಿಕೆಟ್ ಫೈನಲ್ ದಿನ) ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾನೆ. ಒಂದು ವೇಳೆ ಈ ದಿನದಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದರೆ ನಿಮ್ಮ ಜೀವಕ್ಕೆ ತೊಂದರೆ ಎಂದು ಹೇಳಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, "ನಾವು ಸಿಖ್ ಜನರನ್ನು ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಕೇಳುತ್ತಿದ್ದೇವೆ. ಅಂದು ಜಾಗತಿಕ ದಿಗ್ಬಂಧನ ಇರುತ್ತದೆ. ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ. ಆ ದಿನದಂದು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಐಜಿಐ) ಮುಚ್ಚಲಾಗುವುದು. ಅದರ ಹೆಸರನ್ನು ಬದಲಾಯಿಸಲಾಗುವುದು. ಈ ವಿಮಾನ ನಿಲ್ದಾಣದ ಹೆಸರು ಶಾಹಿದ್ ಬಿಯಾಂತ್ ಸಿಂಗ್, ಶಾಹಿದ್ ಸತ್ವಂತ್ ಸಿಂಗ್ ಖಲಿಸ್ತಾನ್ ವಿಮಾನ ನಿಲ್ದಾಣ ಎಂದು ಇಡುತ್ತೇವೆ" ಎಂದು ಹೇಳಿದ್ದಾನೆ.
ವಾಸ್ತವವಾಗಿ, 2023ರ ನವೆಂಬರ್ 19ರಂದು ವಿಶ್ವಕಪ್ ಕ್ರಿಕೆಟ್‌ನ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಈಗಾಗಲೇ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಕಪ್ ಗೆಲ್ಲಲು ಸಜ್ಜಾಗಿದೆ. ಈ ಬೆನ್ನಲ್ಲೇ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.