ಚಂಡಿಗಢ(ಪಂಜಾಬ್): ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಪ್ರತ್ಯೇಕತಾವಾದಿ ಸಂಘಟನೆಯ ಮೂವರು ಸದಸ್ಯರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ರೆಫರೆಂಡಮ್-2020 ಎಂಬ ಹೆಸರಿನಲ್ಲಿ ಕರಪತ್ರಗಳನ್ನು ಹಂಚುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಲುಧಿಯಾನಾ ಜಿಲ್ಲೆಯ ಖನ್ನಾ ನಗರದ ಬಳಿಯ ರಾಮಪುರ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕರಪತ್ರಗಳನ್ನು ಜಪ್ತಿ ಮಾಡಲಾಗಿದೆ.
ಎಸ್‌ಎಫ್‌ಜೆ ಅನ್ನು 2019ರ ಜುಲೈನಲ್ಲಿ ಯುಎಪಿ ಕಾಯ್ದೆಯಡಿಯಲ್ಲಿ ನಿಷೇಧ ಮಾಡಲಾಯಿತು. ಸಿಖ್ ಪ್ರತ್ಯೇಕತವಾದ ಪರವಾದ ಜನಾಭಿಪ್ರಾಯ ರೂಪಿಸುತ್ತಿದ್ದ ಮತ್ತು ಪಂಜಾಬ್ ರಾಜ್ಯದಲ್ಲಿ ಅಶಾಂತಿ ಮತ್ತು ಕೋಮುಗಲಭೆಗೆ ಕಾರಣವಾಗುತ್ತಿದ್ದ ಆರೋಪದ ಮೇಲೆ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತು.
ಈಗ ಬಂಧಿತರನ್ನು ಖನ್ನಾದ ರಾಂಪುರದ ಗುರ್ವಿಂದರ್ ಸಿಂಗ್, ಮೊರಿಂಡಾದ ರೂಪಾರ್ ಬಳಿಯ ಜಗ್ವಿಂದರ್ ಸಿಂಗ್ ಮತ್ತು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಅಮೆರಿಕ ಮೂಲದ ಗುರುಪತ್ವಂತ್ ಸಿಂಗ್ ಪನ್ನು, ಹರಪ್ರೀತ್ ಸಿಂಗ್, ಬಿಕ್ರಮ್‌ಜೀತ್ ಸಿಂಗ್ ಮತ್ತು ಗುರುಸಹೈ ಮಖು ಹಾಗೂ ಖನ್ನಾದ ಜಗಜೀತ್ ಸಿಂಗ್ ಮಂಗತ್ ವಿರುದ್ಧ ದೂರು ದಾಖಲಾಗಿದೆ.