ಪಾಟ್ನಾ:ಬಿಹಾರದಲ್ಲಿ ರಾಜಕೀಯ ಮೇಲಾಟದ ಲಕ್ಷಣಗಳು ಕಂಡುಬರುತ್ತಿವೆ. ಸಿಎಂ ನಿತೀಶ್ ಅವರು ನಿರಂತರವಾಗಿ ಪಕ್ಷದ ಕಚೇರಿಯಲ್ಲಿ ಸಭೆಗಳನ್ನು ನಡೆಸುತ್ತಿರುವುದನ್ನು ನೋಡಿದ್ರೆ, ಏನೋ ದೊಡ್ಡ ಬದಲಾವಣೆ ಆಗಲಿದೆ ಎಂಬಂತೆ ಕಾಣುತ್ತದೆ. ನಿತೀಶ್ ಮತ್ತೊಮ್ಮೆ ರಾಷ್ಟ್ರೀಯ ಜನತಾ ದಳದ ನೆರವಿನಿಂದ ಸರ್ಕಾರ ಬದಲಿಸಲಿದ್ದಾರೆ ಎಂಬ ಚರ್ಚೆ ಇದೀಗ ಶುರುವಾಗಿದೆ. ತಮ್ಮ ಎಲ್ಲಾ ಶಾಸಕರು ಪಾಟ್ನಾದಿಂದ ಹೊರಗೆ ಹೋಗದಂತೆ ಸಿಎಂ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಪಾಟ್ನಾ ಬಿಟ್ಟು ಹೋಗಬಾರದು, ಯಾವುದೇ ಸಮಯದಲ್ಲಿ ಕರೆದ್ರೂ ತಕ್ಷಣ ಬರಬೇಕು ಎಂದು ಶಾಸಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಇಷ್ಟು ದೊಡ್ಡ ಸಂಚಲನಕ್ಕೆ ಕಾರಣವೇನು ಎಂಬ ಚರ್ಚೆಯೂ ನಡೆಯುತ್ತಿದೆ. ಇದರ ಹಿಂದೆ ಮೂರು ಪ್ರಮುಖ ಕಾರಣಗಳಿರಬಹುದು ಎನ್ನುತ್ತಾರೆ ತಜ್ಞರು. ಮೊದಲನೇಯದು ಜಾತಿ ಗಣತಿ ಮತ್ತು ಎರಡನೇ ಕಾರಣ RCP ಸಿಂಗ್. ಪ್ರಸ್ತುತ, ಮೂರನೇ ಕಾರಣವನ್ನು ಹೆಚ್ಚು ಚರ್ಚಿಸಲಾಗುತ್ತಿದೆ. ಜಾತಿ ಗಣತಿ ವಿಷಯಕ್ಕೆ ಬಂದರೆ, ಈ ಬಗ್ಗೆಯೂ ಜೆಡಿಯು ದೊಡ್ಡ ಹೋರಾಟ ನಡೆಸಬೇಕಾಗಿದೆ. ಹೀಗಿರುವಾಗ ಮತ್ತೊಂದೆಡೆ ಆರ್‌ಸಿಪಿ ಸಿಂಗ್ ಅವರ ರಾಜ್ಯಸಭಾ ಉಮೇದುವಾರಿಕೆಗೆ ಸಂಬಂಧಿಸಿದಂತೆ ನಿತೀಶ್ ಬೇರೆ ಹೆಜ್ಜೆ ಇಟ್ಟರೆ ಜೆಡಿಯುನಲ್ಲಿ ಬಿರುಕು ಮೂಡುವ ಲಕ್ಷಣಗಳು ಗೋಚರಿಸುತ್ತವೆ. ಅಂದಹಾಗೆ, ಜೆಡಿಯುನಲ್ಲಿ ಸಿಎಂ ನಿತೀಶ್ ಅವರು ಬೇರೆ ಯಾವುದೇ ನಾಯಕರ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುವುದಿಲ್ಲ ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ಜಾತಿ ಗಣತಿಗೆ ಸಂಬಂಧಿಸಿದ ರಾಜಕೀಯ ನಿರಂತರವಾಗಿ ನಡೆಯುತ್ತಿರುವುದು ಗಮನಿಸಬೇಕಾದ ಸಂಗತಿ. ಮೇ 27 ರಂದು ಜಾತಿ ಗಣತಿ ಕುರಿತು ಸರ್ವಪಕ್ಷ ಸಭೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ. ಇದೇ ವೇಳೆ ಜಾತಿ ಗಣತಿಗೆ ಸಂಬಂಧಿಸಿದಂತೆ ಒಮ್ಮತ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಮೇ 27ರಂದು ಸರ್ವಪಕ್ಷ ಸಭೆ ಕರೆಯುವ ಕುರಿತು ಎಲ್ಲ ಪಕ್ಷಗಳ ಜತೆ ಮಾತುಕತೆ ನಡೆಯುತ್ತಿದೆ.