ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಜೈಲಿನಿಂದ ಅವಧಿಪೂರ್ವ ಬಿಡುಗಡೆಗೆ ವಿಳಂಬ ಮಾಡುತ್ತಿರುವ ಪಂಜಾಬ್ ಸರ್ಕಾರದ ವಿರುದ್ಧ ಅವರ ಪತ್ನಿ ಡಾ ನವಜೋತ್ ಕೌರ್ ಸಿಧು ಶನಿವಾರ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಕೌರ್ ಸಿಧು, ದರೋಡೆಕೋರರು, ಡ್ರಗ್ ಉದ್ಯಮಿಗಳು, ಹಾರ್ಡ್‌ಕೋರ್ ಕ್ರಿಮಿನಲ್‌ಗಳು, ಅತ್ಯಾಚಾರಿಗಳು ಜಾಮೀನು ಪಡೆಯಬಹುದು ಮತ್ತು ಸರ್ಕಾರದ ನಿಯಮಗಳಿಂದ ಲಾಭ ಪಡೆಯಬಹುದು. ಆದರೆ ಸತ್ಯವಂತ, ಪ್ರಾಮಾಣಿಕ ವ್ಯಕ್ತಿ ತಾನು ಮಾಡದ ಅಪರಾಧಕ್ಕಾಗಿ ನರಳುವಂತಾಗಿದೆ ಮತ್ತು ಕೇಂದ್ರ ನೀಡಿದ ನ್ಯಾಯ ಮತ್ತು ಪರಿಹಾರದಿಂದ ವಂಚಿತವಾಗಿದ್ದಾನೆ ಎಂದು ಬರೆದಿದ್ದಾರೆ. ದೇವರೇ, ನಿನ್ನನ್ನು ಮರೆತವರನ್ನು ದಯವಿಟ್ಟು ಆಶೀರ್ವದಿಸು ಎಂದು ಅವರು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು 1988 ರಲ್ಲಿ ನಡೆದ ಹಿಂದಿನ ರೋಡ್ ರೇಜ್ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಅವರ ಉತ್ತಮ ನಡತೆಯಿಂದಾಗಿ ಅವರನ್ನು ಬೇಗನೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಉತ್ತಮ ನಡತೆಗಾಗಿ ಬಿಡುಗಡೆ ಮಾಡಬೇಕಾದ ಕೈದಿಗಳ ಶಿಫಾರಸು ಪಟ್ಟಿಯನ್ನು ಜೈಲು ಆಡಳಿತವು ಪಂಜಾಬ್ ಸರ್ಕಾರಕ್ಕೆ ಕಳುಹಿಸಿದೆ. ಅದರಲ್ಲಿ ಸಿಧು ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
ಆದರೆ, ಕೊನೆಯ ಕ್ಷಣದಲ್ಲಿ ಅವರ ಬಿಡುಗಡೆಯನ್ನು ಮುಂದೂಡಲಾಗಿದ್ದು, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದರಿಂದ ಅಸಮಾಧಾನಗೊಂಡ ಅವರ ಪತ್ನಿ ನವಜೋತ್ ಕೌರ್ ಪಂಜಾಬ್‌ನ ಭಗವಂತ್ ಮಾನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ವ್ಯಂಗ್ಯಭರಿತ ಟ್ವೀಟ್ ಮಾಡಿರುವ ಅವರು, ನವಜೋತ್ ಸಿಂಗ್ ಸಿಧು ಕ್ರೂರ ಪ್ರಾಣಿಗಳ ವರ್ಗಕ್ಕೆ ಸೇರುತ್ತಾರೆ. ಹೀಗಾಗಿ ಅವರಿಗೆ 75 ನೇ ವರ್ಷದ ಸ್ವಾತಂತ್ರ್ಯದ ಕೊಡುಗೆಯನ್ನು ನೀಡಲು ಸರ್ಕಾರ ಬಯಸುತ್ತಿಲ್ಲ. ನೀವೆಲ್ಲರೂ ಅವರಿಂದ ದೂರವಿರಲು ವಿನಂತಿಸಲಾಗಿದೆ ಎಂದು ಬರೆದಿದ್ದಾರೆ.