ನವದೆಹಲಿ: ದಿಢೀರ್ ಬೆಳವಣಿಗೆಯೊಂದರಲ್ಲಿ ಪಂಜಾಬ್ನ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಇದೀಗ ಅದನ್ನ ಹಿಂಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಅಲ್ಪ ವಿರಾಮ ಬಿದ್ದಿದೆ.
ಪಂಜಾಬ್ ಅಭಿವೃದ್ಧಿ ವಿಷಯದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗಲ್ಲ ಎಂದು ಹೇಳಿದ್ದ ನವಜೋತ್ ಸಿಂಗ್ ಸಿಧು ಸೆಪ್ಟೆಂಬರ್ 28 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಅವರ ಮನವೊಲಿಕೆ ಕಸರತ್ತು ಮಾಡಿದ್ದರು. ಆದರೆ, ಈ ವೇಳೆ ಮಾತು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಹೈಕಮಾಂಡ್ ಮಾತಿಗೆ ಮಣೆದ ಸಿಧು
ನಿನ್ನೆ ನವಜೋತ್ ಸಿಂಗ್ ಸಿಧು ಜೊತೆ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ಬರೋಬ್ಬರಿ 1 ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದರು. ಈ ವೇಳೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಮನವಿ ಮಾಡಿದ್ದರು. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸಹ ಉಪಸ್ಥಿತರಿದ್ದರು. ಇವರ ಮಾತಿಗೆ ಒಪ್ಪಿಕೊಂಡಿದ್ದ ಸಿಧು, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದರು.
ರಾಹುಲ್ ಭೇಟಿ ಮಾಡಿದ ಸಿಧು
ಇದರ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸಿರುವ ನವಜೋತ್ ಸಿಂಗ್ ಸಿಧು, ಪಂಜಾಬ್ ಅಧ್ಯಕ್ಷನಾಗಿ ಮುಂದುವರೆಯುವುದಾಗಿ ತಿಳಿಸಿದ್ದು, ತಮ್ಮ ರಾಜೀನಾಮೆ ಹಿಂಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪಂಜಾಬ್ನಲ್ಲಿ ನಾಳೆಯಿಂದಲೇ ಕೆಲಸ ಆರಂಭ ಮಾಡುವುದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ಎಲ್ಲ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಗಮನಕ್ಕೆ ತರಲಾಗಿದ್ದು, ಇದೀಗ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿರುವ ಕೆಲವೊಂದು ಸಮಸ್ಯೆ ಬಗೆಹರಿಸುವುದಾಗಿ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದು, ಹೀಗಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ ಮುಂದುವರೆಯಲಿದ್ದೇನೆ ಎಂದು ತಿಳಿಸಿದ್ದಾರೆ.