ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಚಿನ್ ಬಿಷ್ಣೋಯಿಯನ್ನು ಅಜರ್ಬೈಜಾನ್ನ ಬಾಕುವಿನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೇವಾಲ ಅವರನ್ನು 2022ರ ಮೇ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸೋದರ ಸಂಬಂಧಿ ಸಚಿನ್ ಬಿಷ್ಣೋಯಿ ಪ್ರಮುಖ ಆರೋಪಿಯಾಗಿದ್ದನು. ಸಚಿನ್ ಪಂಜಾಬ್ನ ಫಾಝಿಲ್ಕಾ ನಿವಾಸಿಯಾಗಿದ್ದನು.
ಆರೋಪಿ ಸಚಿನ್ನನ್ನು ದೆಹಲಿ ಪೊಲೀಸರು ಪಟಿಯಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ವಿವಿಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಲಿದ್ದಾರೆ. ಸಚಿನ್ ವಿರುದ್ಧ ಸಿಧು ಮೂಸೆವಾಲ ಹತ್ಯೆಗೆ ಸಂಚು ರೂಪಿಸಿದ ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪಗಳಿವೆ.
ಸಿಧು ಮೂಸೇವಾಲ ಹತ್ಯೆ ಸಂದರ್ಭ ಸಚಿನ್ ಬಿಷ್ಣೋಯಿ ವಿದೇಶದಲ್ಲಿದ್ದನು. ಈ ಪ್ರಕರಣ ತನಿಖೆಯನ್ನು ದಾರಿ ತಪ್ಪಿಸಲು ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ತಾನೇ ಹತ್ಯೆ ಮಾಡಿದಾಗಿ ಹಾಕಿಕೊಂಡಿದ್ದ. ಬಳಿಕ ದುಬೈಗೆ ಪರಾರಿಯಾಗಿದ್ದ ಸಚಿನ್, ಭಾರತ ಮತ್ತು ದುಬೈ ನಡುವೆ ಉತ್ತಮ ಬಾಂಧವ್ಯ ಇರುವುದರಿಂದ ಇಲ್ಲಿ ಬಂಧನ ಸಾಧ್ಯತೆ ಹೆಚ್ಚಿದೆ ಎಂದು ಅಜರ್ಬೈಜಾನ್ಗೆ ತೆರಳಿದ್ದ. 2022ರ ಆಗಸ್ಟ್ ತಿಂಗಳಲ್ಲಿ ಅಜರ್ಬೈಜಾನ್ನಲ್ಲಿ ಸಚಿನ್ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಅಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದ್ದ, ಆದರೆ ನ್ಯಾಯಾಲಯ ಆತನ ಆರ್ಜಿಯನ್ನು ತಿರಸ್ಕರಿಸಿತ್ತು.