ಚಂಡೀಗಢ:ಪಂಜಾಬ್ ರಾಜಕಾರಣ ಮಹತ್ತರ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದೆ. ಈವರೆಗೆ ಕಾಂಗ್ರೆಸ್‌ನಲ್ಲಿ ಹಾವು - ಮುಂಗುಸಿಯಂತಿದ್ದ ಸಿಎಂ ಅಮರಿಂದರ್ ಸಿಂಗ್ ಅವರನ್ನು ನವಜೋತ್ ಸಿಂಗ್ ಸಿಧು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ.
ಸಿಧು ಪದಗ್ರಹಣ
ಪಂಜಾಬ್ ಸಿಎಂ ಭೇಟಿ ಬಳಿಕ ಸಿಧು ಅಪಾರ ಅಭಿಮಾನಿಗಳು, ಕಾಂಗ್ರೆಸ್ ರಾಷ್ಟ್ರೀಯ, ರಾಜ್ಯ ನಾಯಕರ ಸಮ್ಮುಖದಲ್ಲಿ ಇಂದು ಪಂಜಾಬ್ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕ್ಯಾಪ್ಟನ್ ಭೇಟಿ ಮಾಡಿದ ಸಿಧು
ಇದಕ್ಕೂ ಮುನ್ನ ಅವರು, ಸಿಎಂ ಅಮರಿಂದರ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾಲ್ಕು ತಿಂಗಳ ಬಳಿಕ ಮೊದಲ ಬಾರಿಗೆ ಇಬ್ಬರು ನಾಯಕರು ಒಟ್ಟಿಗೆ ಕುಳಿತು ಮಾತನಾಡಿದ್ದಾರೆ.
ಪಂಜಾಬ್ ಭವನದ ಹೊರಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಪರ್ಗತ್ ಸಿಂಗ್, ಚಹಾಕೂಟ ಏರ್ಪಡಿಸಿದ್ದರಿಂದ ಸಿಧು, ಸಿಎಂ ಅವರನ್ನು ಭೇಟಿಯಾದರು. ಸದ್ಯ ಅವರ ಮಧ್ಯೆ ಯಾವುದೇ ವೈಮನಸ್ಸಿಲ್ಲ ಎಂದರು.
ಸಿಂಗ್ ವಿರೋಧದ ನಡುವೆಯೂ ಸಿಧು ನೇಮಕ
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ವಿರೋಧದ ಹೊರತಾಗಿಯೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾನುವಾರ ಪಂಜಾಬ್ ಕಾಂಗ್ರೆಸ್ ಘಟಕದ ಹೊಸ ಅಧ್ಯಕ್ಷರಾಗಿ ಸಿಧು ಅವರನ್ನು ನೇಮಕ ಮಾಡಿದ್ದರು. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಿಧುಗೆ ಸಹಾಯ ಮಾಡಲು ಪಂಜಾಬ್ ಕಾಂಗ್ರೆಸ್‌ನಲ್ಲಿ ನಾಲ್ಕು ಕಾರ್ಯಕಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಸಿಧು ಮುಂದಿನ ಸಿಎಂ ಅಭ್ಯರ್ಥಿ?
ರಾಜ್ಯ ರಾಜಕೀಯದಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಧು ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ಸಿಧು ಸಿಎಂ ಅಭ್ಯರ್ಥಿಯಾದರೆ, ಕ್ಯಾಪ್ಟನ್ ರಾಜಕಾರಣದಿಂದ ದೂರ ಉಳಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.