ಹೈದರಾಬಾದ್: ಪಂಜಾಬ್ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಂತಾಗಿದೆ. ಡಿಸಿಎಂ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಬೇಕು, ಇಲ್ಲದಿಂದ್ರೆ ಎಎಪಿ ಕದ ತಟ್ಟಲು ಮುಂದಾಗಿರುವುದಾಗಿ ಹೇಳಿದ್ದ ಕೈ ನಾಯಕ ನವಜೋತ್ ಸಿಂಗ್ ಸಿಧು ಅವರ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ.
ಸಿಎಂ ಅಮರೀಂದರ್ ಸಿಂಗ್ ವಿರುದ್ಧ ಅಸಮಾಧಾನಗೊಂಡಿದ್ದ ನವಜೋತ್ ಸಿಂಗ್ ಸಿಧುರನ್ನು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ 'ಕೈ' ಕಮಾಂಡ್ ಘೋಷಿಸಿದೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ತರವಾದ ಜವಾಬ್ದಾರಿ ಸಿಧು ಅವರ ಹೆಗಲೇರಿದಂತಾಗಿದೆ.
ನವಜೋತ್ ಸಿಂಗ್ ಸಿಧು ಅವರ ಮುಂದೆ ಹಲವಾರು ಸವಾಲುಗಳಿದ್ದು, 'ಜೀತೇಗ ಪಂಜಾಬ್' ಮಿಷನ್ ಮಂತ್ರ ಜಪ ಆರಂಭಿಸಿದ್ದು, ಜನರ ಸಬಲೀಕರಣದ ಬಗ್ಗೆ ಮಾತುಗಳನ್ನಾಡಿದ್ದಾರೆ.
ಇದೇ ಮೊದಲ ಬಾರಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಗ್ರ ಸ್ಥಾನಕ್ಕೇರಿರುವ ಕ್ರಿಕೆಟರ್ ಕಂ ರಾಜಕಾರಣಿ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಹೈಕಮಾಂಡ್‌ಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದು, ರಾಜ್ಯದಲ್ಲಿ ಜನರು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ಆಶ್ವಾಸನೆಯನ್ನು ತಮ್ಮ ನಾಯಕರಿಗೆ ನೀಡಿದ್ದಾರೆ.