ಆಗ್ರಾ (ಉತ್ತರ ಪ್ರದೇಶ): ದೇಶಾದ್ಯಂತ ನಿನ್ನೆ ರಕ್ಷಾಬಂಧನ ಹಬ್ಬದ ಕಳೆಕಟ್ಟಿತ್ತು. ಇಂದು ಕೂಡ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಆಗ್ರಾದ ನಿವೃತ್ತ ನ್ಯಾಯಾಧೀಶರ ಮಕ್ಕಳು ರಕ್ಷಾಬಂಧನದ ಕಳೆ ಹೆಚ್ಚಿಸಿದ್ದಾರೆ. ಹೌದು, ಅಕ್ಕ - ತಮ್ಮ ಒಂದೇ ದಿನ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು, ಆಪ್ತರು, ಪರಿಚಯಿಸ್ಥರು ಸಂಭ್ರಮಿಸಿದ್ದಾರೆ. ಅಕ್ಕ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡು ಗಮನ ಸೆಳೆದಿದ್ದಾರೆ.
ಗುರಿ ಮತ್ತು ಕಠಿಣ ಪರಿಶ್ರಮ ಅಗತ್ಯ:ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಾಧೀಶರ ಮಕ್ಕಳು, ''ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ಗುರಿ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಬಹುದು. ಸಂಪೂರ್ಣ ಸಮರ್ಪಣೆ ಜೊತೆಗೆ ಗಟ್ಟಿ ಗುರಿ ಹೊಂದುವ ಮೂಲಕ ನಿಮ್ಮ ಸಿದ್ಧತೆ ಪ್ರಾರಂಭಿಸಿ'' ಎಂದು ತಮ್ಮ ಮನದಾಳದ ಮಾತು ಹೇಳಿ ಸಲಹೆ ನೀಡಿದ್ದಾರೆ.
ಆಗ್ರಾದ ಖಂಡೌಲಿ ಪೊಲೀಸ್ ಠಾಣೆಎ ವ್ಯಾಪ್ತಿಯ ನಾಗ್ಲಾ ಅರ್ಜುನ್ ನಿವಾಸಿ ಆರ್ಬಿ ಸಿಂಗ್ ಮೌರ್ಯ ಅವರು ನಿವೃತ್ತ ನ್ಯಾಯಾಧೀಶರು. ಅವರ ಪುತ್ರಿ ಶೈಲಜಾ (25) ಮತ್ತು ಪುತ್ರ ಸುಧಾಂಶ್ (22) ಉತ್ತರ ಪ್ರದೇಶ ನ್ಯಾಯಾಂಗ ಸೇವೆಗೆ ಆಯ್ಕೆ ಆಗಿದ್ದಾರೆ. ಉತ್ತರ ಪ್ರದೇಶ ನ್ಯಾಯಾಂಗ ಸೇವಾ ಪರೀಕ್ಷಾ ಫಲಿತಾಂಶದಲ್ಲಿ ಶೈಲಜಾ ಅವರು 51 ನೇ ರ‍್ಯಾಂಕ್ ಪಡೆದರೆ, ಸುಧಾಂಶ್ 276 ನೇ ರ‍್ಯಾಂಕ್ ಗಳಿಸಿಕೊಂಡಿದ್ದಾರೆ.
ಅಕ್ಕ ತಮ್ಮ ಮೊದಲ ಪ್ರಯತ್ನದಲ್ಲೇ (ಪರೀಕ್ಷೆ) ಯಶಸ್ಸು ಕಂಡಿದ್ದಾರೆ. ಸಹೋದರ ಸಹೋದರಿ ಮನೆಯಲ್ಲೇ ಓದುತ್ತಿದ್ದರು. ರಕ್ಷಾಬಂಧನ ದಿನದಂದು ಹೊರಬಿದ್ದ ಫಲಿತಾಂಶದ ಪ್ರಕಾರ, ಇವರು ನ್ಯಾಯಮೂರ್ತಿಗಳಾಗಿ ಆಯ್ಕೆ ಆಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಶೈಲಜಾ ಮತ್ತು ಸುಧಾಂಶ್ ಉತ್ತರ ಪ್ರದೇಶದ ನ್ಯಾಯಾಂಗ ಸೇವೆಯಲ್ಲಿ ಸಿವಿಲ್ ನ್ಯಾಯಾಧೀಶರಾಗಿ (ಕಿರಿಯ ವಿಭಾಗ) ಆಯ್ಕೆ ಆಗಿದ್ದಾರೆ.