ಹೈದರಾಬಾದ್ (ತೆಲಂಗಾಣ): ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ವೊಬ್ಬರು ಸಿಕ್ಕಿ ಬಿದ್ದಿದ್ದಾರೆ. ಪೊಲೀಸ್ ದಾಳಿ ವೇಳೆ ವಶಪಡಿಸಿಕೊಂಡ ಡ್ರಗ್ಸ್ ಕದ್ದು ಅದನ್ನೇ ಮಾರಾಟ ಮಾಡಲು ಎಸ್‌ಐ ಯತ್ನಿಸುತ್ತಿದ್ದ. ಆರೋಪಿ ಮನೆಯಲ್ಲಿ ಪತ್ತೆಯಾದ ಸುಮಾರು 1,775 ಗ್ರಾಂ ಎಂಡಿಎಂಎ ಡ್ರಗ್ಸ್ಅನ್ನು ತಮ್ಮ ಬಳಿ ಈ ಎಸ್‌ಐ ಇಟ್ಟುಕೊಂಡಿದ್ದ ಎಂದು ವರದಿಯಾಗಿದೆ.
ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ನ ಸೈಬರ್ ಕ್ರೈಂ ವಿಭಾಗದಲ್ಲಿ (ಸಿಸಿಎಸ್) ಕಾರ್ಯನಿರ್ವಹಿಸುತ್ತಿದ್ದ ಕೆ.ರಾಜೇಂದರ್ ಎಂಬಾತನೇ ಬಂಧಿತ ಎಸ್‌ಐ. ರಾಜೇಂದರ್ ಬಳಿ ಡ್ರಗ್ಸ್ ಇರುವ ಮಾಹಿತಿ ಮೇರೆಗೆ ನಾರ್ಕೋಟಿಕ್ಸ್ ಇಲಾಖೆ ಅಧಿಕಾರಿಗಳು, ಈತನ ಮನೆ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ನಂತರ ತೆಲಂಗಾಣ ಮಾದಕ ದ್ರವ್ಯ ನಿಗ್ರಹ ದಳದ (ಟಿಎಸ್‌ಎನ್‌ಎಬಿ) ನಿರ್ದೇಶಕ ಹಾಗೂ ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಬಳಿಕ ಆರೋಪಿ ರಾಜೇಂದರ್ ಅವರನ್ನು ರಾಯದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ:ಮಾದಕ ದ್ರವ್ಯ ಮಾರಾಟ ಯತ್ನ; ಹೈದರಾಬಾದ್‌ನಲ್ಲಿ ತೆಲುಗು ಚಿತ್ರ ನಿರ್ಮಾಪಕ ಅರೆಸ್ಟ್
ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ರಾಜೇಂದರ್ ಇತ್ತೀಚೆಗೆ ಮಹಾರಾಷ್ಟ್ರಕ್ಕೆ ತೆರಳಿದ್ದರು. ಈ ವೇಳೆ ಕೆಲವು ಶಂಕಿತರನ್ನು ಬಂಧಿಸಿದ್ದರು. ಅಲ್ಲದೇ, ಶಂಕಿತ ಆರೋಪಿಗಳ ಮನೆಯಲ್ಲಿ ತಪಾಸಣೆ ನಡೆಸಿದಾಗ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿತ್ತು. ಈ ಡ್ರಗ್ಸ್ ಇರುವ ಪ್ಯಾಕೆಟ್ ಮೇಲೆ ತನ್ನ ಕೈಯಿಟ್ಟು, ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಈ ವಶಪಡಿಸಿಕೊಂಡ ಡ್ರಗ್ಸ್ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಸದ್ಯ ಕುರಿತು ಎಸ್‌ಐ ರಾಜೇಂದರ್ ವಿರುದ್ಧ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಮನೆಯಲ್ಲಿ ಪತ್ತೆಯಾದ ಡ್ರಗ್ಸ್ಅನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ರಾಜೇಂದರ್ ವಿರುದ್ಧ ಈ ಹಿಂದೆಯೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ಸಂಬಂಧ 2022ರ ಸೆಪ್ಟೆಂಬರ್ನಲ್ಲಿ ಎಸ್‌ಐ ತಪ್ಪಿತಸ್ಥರೆಂದು ಸಾಬೀತಾಗಿ ಎರಡು ವರ್ಷಗಳ ಶಿಕ್ಷೆ ಪ್ರಕಟಿಸಲಾಗಿತ್ತು. ಹೀಗಾಗಿ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಎಸ್‌ಐ ರಾಜೇಂದರ್ ಉನ್ನತ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದಾದ ನಂತರ ಸೈಬರಾಬಾದ್ ಸಿಸಿಎಸ್ ವಿಭಾಗಕ್ಕೆ ಎಸ್‌ಐ ಆಗಿ ಇವರನ್ನು ವರ್ಗಾವಣೆ ಮಾಡಲಾಗಿತ್ತು. (ಐಎಎನ್ಎಸ್)
ಇದನ್ನೂ ಓದಿ:Hyderabad Drugs Case: ನಿರ್ಮಾಪಕ ಕೆಪಿ ಚೌಧರಿ ಕಾಲ್ ಲಿಸ್ಟ್‌ನಲ್ಲಿ ಸೆಲೆಬ್ರಿಟಿಗಳ ಹೆಸರು ಪತ್ತೆ ಹಚ್ಚಿದ ಪೊಲೀಸರು