ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ನನ್ನನ್ನು ಕೊಲೆ ಮಾಡಿಸಲು ಹಂತಕರಿಗೆ ಸುಪಾರಿ ನೀಡಿದ್ದಾರೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಮತ್ತು ಥಾಣೆ ಪೊಲೀಸ್ ಅಧಿಕಾರಿಗಳಿಗೆ ಸಂಜಯ್ ರಾವತ್ ಪತ್ರ ಬರೆದಿದ್ದಾರೆ. ತಮಗೆ ಜೀವ ಬೆದರಿಕೆ ಇದೆ. ನನ್ನನ್ನು ಕೊಲೆ ಮಾಡಲು ಸಿಎಂ ಪುತ್ರ ಶ್ರೀಕಾಂತ್ ಶಿಂಧೆ ಕುಖ್ಯಾತ ಗೂಂಡಾ ಒಬ್ಬರಿಗೆ ಸುಪಾರಿ ನೀಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಹಾಅಘಾಡಿ ಸರ್ಕಾರ ನೀಡಿದ್ದ ಭದ್ರತೆಯನ್ನು ಈಗಿನ ಸರ್ಕಾರ ವಾಪಸ್ ಪಡೆದಿದೆ. ಈ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ರಾಜಕೀಯವಾಗಿ ಇಂತಹ ನಿರ್ಧಾರಗಳು ಆಗುತ್ತವೆ. ಆದರೆ, ನನ್ನ ಮೇಲೆ ನಡೆಯುತ್ತಿರುವ ಮಸಲತ್ತು ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕಾಗಿದೆ" ಎಂದು ಸಂಜಯ್ ರಾವತ್ ಪತ್ರದಲ್ಲಿ ಹೇಳಿದ್ದಾರೆ.
ತಮಗಿರುವ ಜೀವ ಬೆದರಿಕೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ತಮಗೆ ಸರ್ಕಾರದಿಂದ ಯಾವುದೇ ಭದ್ರತೆಯ ಅಗತ್ಯವಿಲ್ಲ. ನಾನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದೇನೆ. ಮುಂಬೈ ಸಿಪಿ ವಿವೇಕ್ ಫನ್ಸಾಲ್ಕರ್ ಮತ್ತು ಥಾಣೆ ಸಿಪಿ ಅವರಿಗೂ ಈ ಬಗ್ಗೆ ಪತ್ರ ಮುಖೇನ ತಿಳಿಸಿದ್ದೇನೆ. ಇದಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕರೆ ಮಾಡಿ ಮಾಡಿ ಮಾಹಿತಿ ನೀಡಿದ್ದೇನೆ" ಎಂದು ಅವರು ಹೇಳಿದರು.