ಜೈಪುರ,(ರಾಜಸ್ಥಾನ) :ದೇಶದಲ್ಲಿ ಬಿಡಾಡಿ ಹಸುಗಳ ರಕ್ಷಣೆಗೆಂದು ನೂರಾರು ಸಂಘ-ಸಂಸ್ಥೆಗಳಿವೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಹಸುಗಳ ರಕ್ಷಣೆಗೆ ಮುಂದಾಗಿ ಮಾನವೀಯತೆ ಪಾಠ ಮಾಡಿವೆ. ಇಂಥ ಮಹಾನ್ ಕಾರ್ಯಕ್ಕೆ ಅತ್ಯುತ್ತಮ ಉದಾಹರಣೆ ಅಂದರೆ ರಾಜಸ್ಥಾನದ ಚುರುವಿನ ಸಾಲಸಾರ್ನಲ್ಲಿನ ಶ್ರೀ ಬಾಲಾಜಿ ಗೋಶಾಲಾ ಸಂಸ್ಥೆ ಸಹ ಒಂದಾಗಿದೆ. ಈ ಗೋಶಾಲೆಯಲ್ಲಿ ಹಸುಗಳಿಗೆ ವಿಶೇಷ ಆಥಿತ್ಯ ನೀಡಲಾಗುತ್ತದೆ. ಅಲ್ಲದೇ ಇಲ್ಲಿನ ಹಸುಗಳಿಗೆ ಇಸ್ರೇಲ್ ಮಾದರಿಯ ಆಧುನಿಕ ತಂತ್ರಜ್ಞಾನದ ಮೂಲಕ ಸಾವಯವ ಆಹಾರ ನೀಡಲಾಗುತ್ತದೆ.
ಇದು ಮಾತ್ರವಲ್ಲ ಹಸುಗಳ ಹಸಿವು ನೀಗಿಸಲು 1 ಗಂಟೆಯಲ್ಲಿ ಸಾವಿರ ರೊಟ್ಟಿ ತಯಾರಿಸುವ ಯಂತ್ರ ಸಹ ಈ ಗೋಶಾಲೆಯಲ್ಲಿದೆ. ಈ ಗೋಶಾಲೆಯಲ್ಲಿ ಬರೋಬ್ಬರಿ 1,600 ಹಸುಗಳು ಆಶ್ರಯ ಪಡೆದಿವೆ. ಇವುಗಳಲ್ಲಿ ಹಲವು ಅಂಗವಿಕಲತೆಯಿಂದ ಅಥವಾ ವಾರಸುದಾರರಿಲ್ಲದೆ ಮರುಗುತ್ತಿದ್ದ ಹಸುಗಳಾಗಿವೆ. ಇವುಗಳಿಗೀಗ ಆಧುನಿಕ ರೀತಿಯ ಆರೈಕೆ ಸಿಗುತ್ತಿದೆ. ಜೊತೆಗೆ ಗೋಶಾಲೆಯಲ್ಲಿ ಗೋವಿನ ಸಗಣಿ ಬಳಸಿ ಧೂಪ ಮತ್ತು ಅಗರಭತ್ತಿಗಳನ್ನ ತಯಾರಿಸಲಾಗುತ್ತಿದೆ.