ನವದೆಹಲಿ :ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ವಿಚಾರಣೆ ಇಂದು ದೆಹಲಿ ಸಾಕೇತ್ ನ್ಯಾಯಾಲಯದಲ್ಲಿ ನಡೆದಿದೆ. ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾ ವಾಕರ್ನ್ನು 35 ಭಾಗಗಳಾಗಿ ಕತ್ತರಿಸಿ ಇರಿಸಿದ್ದ ರೆಫ್ರಿಜರೇಟರ್ನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ಹಾಜರುಪಡಿಸಿದ್ದಾರೆ. ಇದರ ಜೊತೆಗೆ ಎರಡು ಪ್ಲೈವುಡ್ ತುಂಡನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಮನಿಶಾ ಖುರಾನ ಕಕ್ಕರ್ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಕಳೆದ 2022ರ ಮೇ 18ರಂದು ನವದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾ ವಾಕರ್ನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಕೊಲೆ ಮಾಡಿದ ನಂತರ ಆರೋಪಿ ಪೂನಾವಾಲಾ ಶ್ರದ್ಧಾಳ ದೇಹವನ್ನು ಗರಗಸದಿಂದ 35 ಭಾಗಗಳಾಗಿ ತುಂಡರಿಸಿದ್ದನು. ಬಳಿಕ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿ ಕಸದ ಚೀಲಗಳಲ್ಲಿ ತುಂಬಿ ದೆಹಲಿಯ ವಿವಿಧ ನಿರ್ಜನ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದ.
ಆರೋಪಿ ಅಫ್ತಾಬ್ ಶ್ರದ್ಧಾಳ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಈ ಸಂದರ್ಭದಲ್ಲಿ ಅಫ್ತಾಬ್ನ ಇನ್ನೋರ್ವ ಗೆಳತಿ ಮನೆಗೆ ಭೇಟಿ ನೀಡಿದ್ದಳು. ತುಂಡರಿಸಿದ ದೇಹದಿಂದ ವಾಸನೆ ಬಾರದಿರಲೆಂದು ಆರೋಪಿ ಅಫ್ತಾಬ್ ಸುಗಂಧ ದ್ರವ್ಯವನ್ನು ಹಾಕಿದ್ದ ಎಂದು ಹೇಳಲಾಗಿದೆ. ಅಲ್ಲದೆ ಸುತ್ತಮುತ್ತಲಿನವರಿಗೂ ಅನುಮಾನ ಬಾರದಿರಲಿ ಎಂದು ಇಲ್ಲಿ ಸುಗಂಧ ದ್ರವ್ಯವನ್ನು ಹಾಕಿದ್ದ.