ನವದೆಹಲಿ:ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಕುಖ್ಯಾತ ಆರೋಪಿ ಅಫ್ತಾಬ್ ಪೂನಾವಾಲಾನನ್ನು ದೆಹಲಿ ಪೊಲೀಸರು ಗುರುವಾರ ಸಾಕೇತ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ಅವಧಿಗೆ ಕಸ್ಟಡಿ ಕೋರಲಿದ್ದಾರೆ. ಆರೋಪಿಯು ಸ್ವತಃ ಅಪರಾಧ ಒಪ್ಪಿಕೊಂಡಿದ್ದಾನೆ. ಕೊಲೆಯ ವಿವರಗಳನ್ನು ಹೇಳಿದ್ದರೂ, ಆತ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಆತ ಪ್ರಕರಣದ ದಾರಿ ತಪ್ಪಿಸುತ್ತಿರಬಹುದು. ಆರೋಪಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಕನಿಷ್ಠ ಒಂದು ವಾರ ಹೆಚ್ಚುವರಿ ಕಸ್ಟಡಿ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಪೊಲೀಸರು ಮೆಹ್ರೌಲಿ ಅರಣ್ಯ ಪ್ರದೇಶದಿಂದ ಮಾನವ ಮೂಳೆಗಳೆಂದು ಶಂಕಿಸಲಾದ ಕೆಲವು ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ದೃಢೀಕರಣಕ್ಕಾಗಿ ವಿಧಿವಿಜ್ಞಾನ ತಂಡಕ್ಕೆ ಕಳುಹಿಸಿದ್ದಾರೆ. ಮೇ 18 ರಂದು ಅಫ್ತಾಬ್ ಶ್ರದ್ಧಾಳ ಕತ್ತು ಹಿಸುಕಿ ಕೊಂದ ನಂತರ ಆಕೆಯ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಮೆಹ್ರೌಲಿ ಫ್ಲಾಟ್‌ನಲ್ಲಿ ಕೆಲ ರಕ್ತದ ಕಲೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಫ್ತಾಬ್ ಕೊಲೆ ಮಾಡಲು ಉಪಯೋಗಿಸಿದ ಆಯುಧ ಮತ್ತು ಫ್ರಿಡ್ಜ್ ಸೇರಿದಂತೆ ನೆರೆಹೊರೆಯವರು, ಸ್ನೇಹಿತರು ಮತ್ತು ಅಂಗಡಿಕಾರರಿಂದ ಪೊಲೀಸರು ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶ್ರದ್ಧಾಳನ್ನು ಕೊಲೆ ಮಾಡಿದ್ದ ಅಫ್ತಾಬ್, ಅವಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅವನ್ನು ಫ್ರಿಜ್ನಲ್ಲಿ ಇಟ್ಟಿದ್ದ.