ನವದೆಹಲಿ:ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರು 3 ಸಾವಿರ ಪುಟಗಳ ಚಾರ್ಜ್‌ಶೀಟ್, 100 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ದೇಶವೇ ಬೆಚ್ಚಿ ಬೀಳುವಂತೆ ಶ್ರದ್ಧಾಳನ್ನು 35 ತುಂಡು ಮಾಡಿದ್ದ ಹಂತಕ ಅಫ್ತಾಬ್ ಅಮೀನ್ ಪೂನವಾಲಾ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ. ಲಿವ್ ಇನ್ ಗೆಳತಿಯನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು ಗರಗಸದಿಂದ 35 ತುಂಡುಗಳಾಗಿ ಕತ್ತರಿಸಿದ್ದಲ್ಲದೇ, ನಿರ್ಜನ ಪ್ರದೇಶದಲ್ಲಿ ಚೆಲ್ಲಾಡಿದ್ದ ನರಹಂತಕನ ವಿರುದ್ಧ 100 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಚಾರ್ಜ್ ಶೀಟ್ನಲ್ಲಿ ಫೋರೆನ್ಸಿಕ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳೂ ಇವೆ ಎಂದು ಮೂಲಗಳು ತಿಳಿಸಿವೆ.
ಸಿದ್ಧಪಡಿಸಲಾದ ಚಾರ್ಜ್ ಶೀಟ್ ಕರಡನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದು, ಈ ತಿಂಗಳಾಂತ್ಯಕ್ಕೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಸಾಧ್ಯತೆ ಇದೆ. ಛತ್ತರ್‌ಪುರದ ಅರಣ್ಯದಿಂದ ಪತ್ತೆಯಾದ ಮೂಳೆಗಳು ಮತ್ತು ಅವುಗಳ ಡಿಎನ್‌ಎ ವರದಿ ಶ್ರದ್ಧಾ ಅವರದ್ದು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಓದಿ:ಶ್ರದ್ಧಾ ಹತ್ಯೆ: ಅಫ್ತಾಬ್ನ ಧ್ವನಿ ಮಾದರಿ ದಾಖಲಿಸಿಕೊಂಡ ಸಿಎಫ್‌ಎಸ್‌ಎಲ್ ತಂಡ
ತನ್ನ ಗೆಳತಿಯನ್ನು ಹೇಗೆ ಕೊಂದೆ ಎಂಬ ಬಗ್ಗೆ ಹಂತಕ ಆಫ್ತಾಬ್ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಮತ್ತು ಕೊಲೆಯ ಭೀಕರತೆಯನ್ನು ಬಿಚ್ಚಿಟ್ಟ ನಾರ್ಕೋ ಪರೀಕ್ಷೆಯ ವರದಿಯನ್ನು ಸಹ ಚಾರ್ಜ್‌ಶೀಟ್ ಹೊಂದಿದೆ. ಈ ಎಲ್ಲಾ ದೋಷಾರೋಪಗಳು ನ್ಯಾಯಾಲಯದಲ್ಲಿ ಸಿಂಧುವಾಗದೇ ಇದ್ದರೂ, ಜನವರಿ 4 ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿನ ಅರಣ್ಯ ಪ್ರದೇಶದಿಂದ ಪೊಲೀಸರು ಶ್ರದ್ಧಾ ಅವರ ಕೂದಲು ಮತ್ತು ಮೂಳೆಗಳ ಮಾದರಿಗಳನ್ನು ಕಲೆ ಹಾಕಿದ್ದು, ಅವೇ ಬಲವಾದ ಸಾಕ್ಷ್ಯಾಧಾರಗಳಾಗಿವೆ.