ನವದೆಹಲಿ/ಗಾಜಿಯಾಬಾದ್:ದಿಲ್ಲಿಯಲ್ಲಿ ಹಿಂದು ಯುವತಿ ಶ್ರದ್ಧಾ ವಾಕರ್ಳನ್ನು ಅನ್ಯಧರ್ಮದ ಅಫ್ತಾಬ್ ಪೂನಾವಾಲಾ 35 ತುಂಡು ಮಾಡಿ ಕೊಂದ ಪ್ರಕರಣದಂತೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಥೇಟ್ ಅಂಥದ್ದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹಜೀವನ ನಡೆಸುತ್ತಿದ್ದ ಯುವತಿಯನ್ನು, ಪ್ರೇಮಿ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದ ಕುಲುವಿನಲ್ಲಿ ಎಸೆದು ಬಂದ ಆಘಾತಕಾರಿ ಕೇಸ್ ಬಯಲಾಗಿದೆ.
ಗಾಜಿಯಾಬಾದ್ ಮೂಲದ ಕೊಲೆಯಾದ ಯುವತಿ ಕುಟುಂಬದೊಂದಿಗೆ ದೂರವಾಗಿ ಆರೋಪಿ ರಾಮನ್ ಎಂಬಾತನ ಜೊತೆಗೆ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದರು. ಮದುವೆ ವಿಷಯಕ್ಕಾಗಿ ಇಬ್ಬರ ಮಧ್ಯೆ ನಡೆದ ಜಗಳದಲ್ಲಿ ಯುವಕ, ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದಲ್ಲಿ ಬಿಸಾಡಿದ್ದ.
ಪ್ರಕರಣವೇನು?:ಗಾಜಿಯಾಬಾದ್ನ ವಸುಂದರಾ ಪ್ರದೇಶದ ನಿವಾಸಿಯಾದ ಯುವತಿ, ಕುಟುಂಬವನ್ನು ತ್ಯಜಿಸಿ ಏಕಾಂಗಿಯಾಗಿ ಜೀವಿಸುತ್ತಿದ್ದಳು. ಅದೇ ಜಿಲ್ಲೆಯ ಸಿರೌಲಿಯ ಯುವಕ ರಾಮನ್ ಆಕೆಯ ಜೊತೆಗೆ ಪ್ರೇಮಸಂಬಂಧ ಹೊಂದಿದ್ದ. ಬಳಿಕ ಇಬ್ಬರು ಸಹಜೀವನ ನಡೆಸುತ್ತಿದ್ದರು.
ಕೆಲ ವರ್ಷಗಳ ಬಳಿಕ ಯುವತಿ ಮದುವೆಯಾಗಲು ರಾಮನ್ನನ್ನು ಕೇಳಿದ್ದಾಳೆ. ಇದಕ್ಕೆ ಆತ ಒಪ್ಪಿಗೆ ನೀಡಿರಲಿಲ್ಲ. ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿತ್ತು. ಬಳಿಕ ಯುವತಿ ಒತ್ತಡ ಹೇರಿದ್ದರಿಂದ ರಾಮನ್ ಆಕೆಯನ್ನು ಪ್ರವಾಸಕ್ಕೆಂದು ಹಿಮಾಚಲಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಕುಲುವಿನಲ್ಲಿದ್ದಾಗ ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದಂತೆ ಹಿಮದಲ್ಲಿ ಶವವನ್ನು ಬಿಸಾಡಿ ಬಂದಿದ್ದಾನೆ.
ನಿರ್ಜನ ಪ್ರದೇಶದಲ್ಲಿ 7 ತಿಂಗಳ ಹಿಂದೆ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಯುವತಿಯನ್ನು ಕೊಲೆ ಮಾಡಿ ರಾಮನ್ ಬಳಿಕ ಅದೇ ಮನೆಯಲ್ಲಿ ನಿರಾಳವಾಗಿ ವಾಸ ಮಾಡುತ್ತಿದ್ದ, ಇದು ಯಾರಿಗೂ ಅನುಮಾನ ಮೂಡಿಸಿರಲಿಲ್ಲ.
ಕೇಸ್ ಬಯಲಾಗಿದ್ದೇಗೆ?:ಈ ಕಡೆ ಯುವತಿಯ ತಾಯಿ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ನಾಪತ್ತೆ ಕೇಸ್ ದಾಖಲಿಸಿದ್ದರು. 7 ತಿಂಗಳಿಂದ ತನ್ನ ಮಗಳು ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ತನಿಖೆ ನಡೆಸಿದಾಗ ಆಕೆ ರಾಮನ್ ಜೊತೆ ಸಹಜೀವನ ನಡೆಸುತ್ತಿದ್ದುದು ಗೊತ್ತಾಗಿದೆ. ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ.
ಓದಿ:-40 ಡಿಗ್ರಿಗೆ ಇಳಿದ ತಾಪಮಾನ: ಮಂಜುಗಡ್ಡೆಯಂತಾದ ಅಮೆರಿಕ