ಕೋವಿಡ್ ಮೂರನೇ ಅಲೆ ಸಮೀಪಿಸುವಂತಿದ್ದು, ಮುಂದಿನ ಎರಡು ತಿಂಗಳಲ್ಲಿ ಅಂದರೆ ಅಕ್ಟೋಬರ್ ಒಳಗಾಗಿ ಆರ್ಭಟಿಸುವ ಸಾಧ್ಯತೆಯಿದೆ. ವಯಸ್ಕರ ಮೇಲೆ ಮಾತ್ರವಲ್ಲದೇ, ಮಕ್ಕಳ ಮೇಲೆ ಮೂರನೇ ಅಲೆಯ ಪರಿಣಾಮ ಹೆಚ್ಚು ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಹೀಗಿರುವಾಗ ಶಾಲೆಗಳನ್ನು ತೆರೆಯಬೇಕೇ ಎಂಬುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಅಗತ್ಯ ಸೌಲಭ್ಯಗಳಿಲ್ಲ
ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಛತ್ತೀಸ್ಗಢ, ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಶಾಲಾ-ಕಾಲೇಜುಗಳನ್ನು ಪುನಾರಂಭಿಸಿವೆ. ಒಂದು ವೇಳೆ ಕೊರೊನಾ ಉಲ್ಬಣಗೊಂಡು, ಮಕ್ಕಳು ಸೋಂಕಿಗೆ ಒಳಗಾದರೆ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಬೇಕಾದ ವೈದ್ಯರು, ಸಿಬ್ಬಂದಿ, ವೆಂಟಿಲೇಟರ್‌ಗಳು, ಆಂಬ್ಯುಲೆನ್ಸ್‌ಗಳು, ಆಮ್ಲಜನಕ ಸಾಂದ್ರಕಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಸಾಕಷ್ಟು ಲಭ್ಯವಿಲ್ಲ ಎಂಬ ಆತಂಕಕಾರಿ ಸಂಗತಿಯನ್ನೂ ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (NIDM)ಯ ತಜ್ಞರ ಸಮಿತಿ ಹೊರ ಹಾಕಿದೆ.
ಲಸಿಕೆ - ಹೊಸ ರೂಪಾಂತರ
ತಜ್ಞರ ಸಮಿತಿಯು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಮಕ್ಕಳಿಗೆ ಅದರಲ್ಲಿಯೂ ವಿಶೇಷಚೇತನ ಮಕ್ಕಳು ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಆದಷ್ಟು ಬೇಗ 'ಲಸಿಕೆ' ನೀಡುವಂತೆ ತಿಳಿಸಿದೆ. ಕೆಲ ತಜ್ಞರು 3ನೇ ಕೋವಿಡ್ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದ್ದರೆ, ಕೆಲ ತಜ್ಞರು 12-16 ವಾರಗಳಲ್ಲಿ ಮೂರನೇ ಅಲೆ ಅಪ್ಪಳಿಸುವುದು ಮಾತ್ರವಲ್ಲ, ಅಸ್ತಿತ್ವದಲ್ಲಿರುವ ಲಸಿಕೆಗಳನ್ನು ದುರ್ಬಲಗೊಳಿಸುವ ಹೊಸ ರೂಪಾಂತರಗಳ ಬಗ್ಗೆ ಚಿಂತಿತರಾಗಿದ್ದಾರೆ.