ನವದೆಹಲಿ:ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರನ್ನು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅಣಕ ಮಾಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಜಗದೀಪ್ ಧನಕರ್ ಜಾತಿಯನ್ನೂ ಮುನ್ನೆಲೆಗೆ ತರಲಾಗಿದ್ದು, ಜಾಟ್ ಸಮುದಾಯ ಹಾಗೂ ರೈತರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾದ ಪ್ರತಿಕ್ರಿಯಿಸಿ, ಪ್ರತಿಯೊಂದು ವಿಷಯದಲ್ಲೂ ಜಾತಿಯನ್ನು ಎಳೆದು ತರಬಾರದು. ರಾಜ್ಯಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಗದಿದ್ದಾಗ ಪ್ರತಿ ಬಾರಿಯೂ ದಲಿತ ಮೂಲವನ್ನು ನಾನು ಕೆಣಕಬೇಕೇ ಎಂದು ಪ್ರಶ್ನಿಸಿದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ''ಸದನದ ಸದಸ್ಯರಿಗೆ ರಕ್ಷಣೆ ನೀಡುವುದು ಸಭಾಪತಿಯವರ ಕರ್ತವ್ಯ. ಆದರೆ, ಅವರೇ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಆಗಾಗ್ಗೆ ಮಾತನಾಡಲು ನನಗೆ ಅವಕಾಶ ಸಿಗಲ್ಲ. ನಾನು ದಲಿತ ಎಂಬ ಕಾರಣಕ್ಕೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಹೇಳಬಹುದೇ?. ಒಳಗೊಳಗೆ ಮಾತನಾಡಿಕೊಂಡು ಜಾತಿಯ ಹೆಸರಿನಲ್ಲಿ ಹೊರಗಿನವರನ್ನು ಪ್ರಚೋದಿಸಬಾರದು'' ಎಂದು ಅಸಮಾಧಾನ ಹೊರಹಾಕಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾದ ಅಧೀರ್ ರಂಜನ್ ಚೌಧರಿ ಪ್ರತಿಕ್ರಿಯಿಸಿ, ''ಸಾಂವಿಧಾನಿಕ ಸ್ಥಾನದಲ್ಲಿರುವವರು ತಮ್ಮ ಜಾತಿಗಳ ಬಗ್ಗೆ ಮಾತನಾಡುವುದು ಅತ್ಯಂತ ದುಃಖಕರ ಸಂಗತಿ. ಇಂತಹ ವಿಷಯಗಳನ್ನು ಮುನ್ನಲೆಗೆ ತರುವ ಮೂಲಕ ಸಂಸತ್ತಿನ ಭದ್ರತಾ ಲೋಪದ ಘಟನೆ ವಿಷಯದ ಬಗ್ಗೆ ಸರ್ಕಾರ ತನ್ನ ಕೈ ತೊಳೆಯಲು ಪ್ರಯತ್ನಿಸುತ್ತಿದೆ. ಎಲ್ಲರೂ ಈಗ ತಮ್ಮ ಜಾತಿಯನ್ನು ಘೋಷಿಸುವ ಹಣೆಪಟ್ಟಿ ಹಾಕಿಕೊಂಡು ತಿರುಗಾಡಬೇಕೇ'' ಎಂದು ವಿಷಾದ ವ್ಯಕ್ತಪಡಿಸಿದರು.