ಜಮ್ಮು-ಕಾಶ್ಮೀರ :ಜುಲೈ 18ರಂದು ಶೋಪಿಯಾನ್ ಜಿಲ್ಲೆಯಲ್ಲಿ ನಡೆದ "ನಕಲಿ" ಎನ್ಕೌಂಟರ್ನಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸೇನಾ ಕ್ಯಾಪ್ಟನ್ ಸೇರಿದಂತೆ ಮೂವರು ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಶನಿವಾರ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಚಾರ್ಜ್‌ಶೀಟ್‌ನ ಪ್ರಧಾನ ಜಿಲ್ಲಾ ನ್ಯಾಯಾಲಯ ಮತ್ತು ಶೋಪಿಯಾನ್‌ನ ಸೆಷನ್ಸ್ ನ್ಯಾಯಾಧೀಶರರೆದುರು ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 62 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಭೂಪಿಂದರ್, ಪುಲ್ವಾಮಾ ನಿವಾಸಿ ಬಿಲಾಲ್ ಅಹ್ಮದ್ ಮತ್ತು ಶೋಪಿಯಾನ್ ನಿವಾಸಿ ತಬೀಶ್ ಅಹ್ಮದ್ ಈ ಪ್ರಕರಣದ ಮೂವರು ಆರೋಪಿಗಳಾಗಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಈ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಹುಸೇನ್ ವಜಾಹತ್ ಹುಸೇನ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರ ವಿರುದ್ಧ ವಜಹತ್ ಹುಸೇನ್ 300 ಪುಟಗಳ ಚಾರ್ಜ್‌ಶೀಟ್‌ನ ಶೋಪಿಯಾನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ಕ್ರಮಗಳ ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಕ್ಷ್ಯಗಳ ಸಾರಾಂಶವನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದು ಸೇನೆಯು ತಿಳಿಸಿದೆ.