ಕೋಲ್ಕತ್ತಾ:ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಕಾಶಿಪಾರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಗಾಯಾಳುಗಳು ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕಾಂಗ್ರೆಸ್‌ಗೆ ರಾಜಕೀಯ ಸಂಬಂಧ ಹೊಂದಿರುವ ಎರಡು ಕುಟುಂಬಗಳಿಗೆ ಸೇರಿದವರು ಎಂದು ವರದಿಯಾಗಿದೆ.
ಐವರ ಸ್ಥಿತಿ ಚಿಂತಾಜನಕ:ಗಾಯಗೊಂಡ 15 ಮಂದಿಯಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. 'ಈ ಗುಂಡಿನ ಚಕಮಕಿ ಮೂರು ಹಂತದ ಪಂಚಾಯತ್ ವ್ಯವಸ್ಥೆಗೆ ಇತ್ತೀಚೆಗೆ ಮುಕ್ತಾಯವಾದ ಚುನಾವಣೆ ವೇಳೆ ಈ ಪ್ರದೇಶದಲ್ಲಿ ಕಾಣಿಸಿಕೊಂಡ ರಾಜಕೀಯ ಹಿಂಸಾಚಾರದ ಮುಂದುವರಿಕೆಯಾಗಿದೆ' ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಮೂರು ಸ್ಥರಗಳ ಪಂಚಾಯ್ತಿ ಚುನಾವಣೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ರಾಯ್ ಹೇಳಿದ್ದಾರೆ. ಪೊಲೀಸ್ ತುಕಡಿಯನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:TMC leader arrested.. ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಪಿಸ್ತೂಲ್ ಇಟ್ಟುಕೊಂಡು ಬಂದಿದ್ದ ಟಿಎಂಸಿ ನಾಯಕ ಅರೆಸ್ಟ್
ನಾಡಿಯಾದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ನಾಡಿಯಾ ಅಸೀಮ್ ಸಹಾ ಅವರು ತಮ್ಮ ಮನೆಗಳ ಮೇಲೆ ದಾಳಿ ಮಾಡಿದವರು ಇತ್ತೀಚಿನವರೆಗೂ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಅವರು ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಗೆ ಮೊದಲು ಕಾಂಗ್ರೆಸ್‌ಗೆ ಸೇರ್ಪಪಡೆಗೊಂಡರು ಎಂದು ಆರೋಪಿಸಿದರು. ಈ ಸೇರ್ಪಡೆ ಆಡಳಿತ ಪಕ್ಷದ ನಾಯಕತ್ವದ ನಡುವೆ ದ್ವೇಷ ಸೃಷ್ಟಿಸಿತು. ಅದರ ಪರಿಣಾಮವೇ ಸೋಮವಾರ ತಡರಾತ್ರಿ ನಡೆದ ಶೂಟೌಟ್.
ಗೂಂಡಾಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸಿದರು. ಶೂಟೌಟ್ ಮುಗಿದ ನಂತರ ಅವರು ಘಟನಾ ಸ್ಥಳಕ್ಕೆ ಆಗಮಿಸಿದರು. ಅಷ್ಟರಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಹಾ ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ನಾಡಿಯಾ ಜಿಲ್ಲಾಧ್ಯಕ್ಷ:ಮತ್ತೊಂದೆಡೆ, ಘಟನೆಯ ಹಿಂದೆ ತಮ್ಮ ಪಕ್ಷದ ಬೆಂಬಲಿಗರ ಕೈವಾಡವನ್ನು ತೃಣಮೂಲ ಕಾಂಗ್ರೆಸ್‌ನ ನಾಡಿಯಾ ಜಿಲ್ಲಾಧ್ಯಕ್ಷ ನಸೀರುದ್ದೀನ್ ಅಹ್ಮದ್ ನಿರಾಕರಿಸಿದ್ದಾರೆ. ಇದು ಸ್ಥಳೀಯ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವಿನ ಘರ್ಷಣೆಯಾಗಿದೆ. ನಾವು ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: TMC ಕಾರ್ಯಕರ್ತನ ಹತ್ಯೆ, ಕಾಂಗ್ರೆಸ್ ಮುಖಂಡನಿಗೆ ಗುಂಡು