ರಾಂಚಿ (ಜಾರ್ಖಂಡ್):ರಾಷ್ಟ್ರೀಯ ಶೂಟರ್ ತಾರಾ ಶಹದೇವ್ ಅವರಿಗೆ ಬಲವಂತದ ಮತಾಂತರಕ್ಕೆ ಒತ್ತಡ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ರಾಂಚಿಯ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ವಿಶೇಷ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿತು. ತಾರಾ ಅವರ ಪತಿ ರಕಿಬುಲ್ ಅಲಿಯಾಸ್ ರಂಜಿತ್ ಕೊಹ್ಲಿಗೆ ಜೀವಾವಧಿ ಶಿಕ್ಷೆ, ಆತನ ತಾಯಿ ಕೌಸರ್ ರಾಣಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಹಾಕಿದೆ. ಹೈಕೋರ್ಟ್‌ನ ಆಗಿನ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್‌ಗೂ 15 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ನಿಜ ಹೆಸರು ಮರೆಮಾಚಿ ಮೋಸದಿಂದ ಮದುವೆ: ರಾಷ್ಟ್ರೀಯ ಆಟಗಾರ್ತಿಯಾದ ತಾರಾ ಶಹದೇವ್ 2014ರಲ್ಲಿ ರಂಜಿತ್ ಕೊಹ್ಲಿಯನ್ನು ಮದುವೆಯಾಗಿದ್ದರು. ಆದರೆ, ನಂತರದಲ್ಲಿ ಗಂಡನ ಮನೆಯಲ್ಲಿ ವಿಪರೀತ ಹಿಂಸೆ ಅನುಭವಿಸುತ್ತಿದ್ದರು. ಪದೇ ಪದೇ ಹಲ್ಲೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು. ಪತಿಯ ನಿಜವಾದ ಹೆಸರು ರಂಜಿತ್ ಕೊಹ್ಲಿ ಅಲ್ಲ, ರಕಿಬುಲ್ ಎಂಬುವುದು ಗೊತ್ತಾಗಿ ಮೋಸದಿಂದ ವಿವಾಹವಾಗಿರುವುದು ಬಯಲಾಗಿತ್ತು. ಇದರ ನಡುವೆ ತಾರಾ ಶಹದೇವ್ ತನ್ನ ಪತಿ ಮತ್ತು ಅತ್ತೆ ಮತಾಂತರಕ್ಕೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದರು. ರಾಂಚಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಇದರ ಆಧಾರದ ಮೇಲೆ ರಾಂಚಿ ಪೊಲೀಸರು ದೆಹಲಿಯಲ್ಲಿ ರಂಜಿತ್‌ನನ್ನು ಬಂಧಿಸಿದ್ದರು. ತನಿಖೆಯ ವೇಳೆ ಹೈಕೋರ್ಟ್‌ನ ಅಂದಿನ ಸಬ್ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ಹೆಸರು ಹೊರಬಿದ್ದಿತ್ತು. ಇದರ ನಂತರ ತಾರಾ ಈ ಪ್ರಕರಣ ಸಂಬಂಧ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಅಂತೆಯೇ, ಹೈಕೋರ್ಟ್ ಇದಕ್ಕೆ ಸಮ್ಮತಿಸಿತ್ತು. ಇದರ ಫಲವಾಗಿ, 2015ರಲ್ಲಿ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.