ಭೋಪಾಲ್ (ಮಧ್ಯಪ್ರದೇಶ): ನಾಗರಿಕ ಸಮಾಜ ತಲೆ ತಗ್ಗಿಸುವ ಹಾಗೂ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶ ಸಹ ವ್ಯಕ್ತವಾಗಿದೆ. ಆರೋಪಿಯು ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದಾನೆ ಎಂದು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಆರೋಪ ಮಾಡಿವೆ.
ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ’’ಆದಿವಾಸಿಗಳ ಹಿತಾಸಕ್ತಿಗಳ ಬಗ್ಗೆ ಪೊಳ್ಳು ಮಾತನಾಡುವ ಬಿಜೆಪಿ ನಾಯಕನೊಬ್ಬ ಬುಡಕಟ್ಟು ಬಡವರ ಮೇಲೆ ಈ ರೀತಿ ವರ್ತಿಸಿದ್ದಾನೆ. ಇದು ಅತ್ಯಂತ ಖಂಡನೀಯ ಕೃತ್ಯ ಎಂದು ಕಿಡಿಕಾರಿದ್ದಾರೆ‘‘. ಅಲ್ಲದೇ, ತಮ್ಮ ಟ್ವೀಟ್ ಅನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟ್ಯಾಗ್ ಮಾಡಿ, ’’ಇದು ನಿಮ್ಮ ಬುಡಕಟ್ಟು ಪ್ರೀತಿಯೇ?. ಇದನ್ನೇ ಜಂಗಲ್ ರಾಜ್ ಎಂದು ಕರೆಯುವುದು. ಬಿಜೆಪಿ ನಾಯಕನನ್ನು ಏಕೆ ಬಂಧಿಸಲಿಲ್ಲ‘‘ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ವಿಮಾನಯಾನದಲ್ಲಿ ಮತ್ತೊಂದು ದುರ್ವರ್ತನೆ!
ಪ್ರಾಥಮಿಕ ಮಾಹಿತಿ ಪ್ರಕಾರ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆ ಮಾಡಿ ವಿಕೃತಿಯ ಮೆರೆದ ಆರೋಪಿಯ ಹೆಸರನ್ನು ಪ್ರವೇಶ್ ಶುಕ್ಲಾ ಎಂದು ಹೇಳಲಾಗುತ್ತಿದೆ. ಈತ ಸಿಧಿ ಜಿಲ್ಲೆಯ ಶಾಸಕ ಕೇದಾರ್ ನಾಥ್ ಶುಕ್ಲಾ ಅವರೊಂದಿಗೆ ಗುರುತಿಸಿಕೊಳ್ಳುತ್ತಾನೆ. ಜೊತೆಗೆ ಇತರ ಬಿಜೆಪಿಯ ಹಿರಿಯ ನಾಯಕರೊಂದಿಗೆ ಆರೋಪಿ ಕಾಣಿಸಿಕೊಂಡಿರುವ ಫೋಟೋಗಳ ಸಹ ಬಹಿರಂಗವಾಗಿವೆ ಎಂದು ವರದಿಯಾಗಿವೆ.