ಬಸ್ತಿ( ಉತ್ತರಪ್ರದೇಶ):ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಸಂಚಲನ ಮೂಡಿಸ್ತಿದೆ. ತಾಯಿಯೇ ತನ್ನ ಹೆತ್ತ ಕಂದನನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾರೆ. ಆದ್ರೆ ಮಗುವಿನ ಆಯುಷ್ಯ ಇನ್ನೂ ಗಟ್ಟಿಯಾಗಿದೆ. ತಾಯಿ ಆ ಮಗುವನ್ನು ಸಾಯಿಸಲು ಪ್ರಯತ್ನಿಸಿದ್ರೂ ಸಹ ಮಗು ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ.
ಹೌದು, ಜಿಲ್ಲಾಸ್ಪತ್ರೆ ಆವರಣದಲ್ಲಿ ಹೆರಿಗೆ ನಂತರ ತಾಯಿಯೊಬ್ಬಳು ಮಗುವನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾರೆ. ಅದರಂತೆ ಭೂಮಿಯನ್ನು ಅಗೆದು ಮಗುವನ್ನು ಗುಂಡಿಯೊಳಗೆ ಮುಚ್ಚಲು ಯತ್ನಿಸಿದ್ದಾರೆ. ಆದರೆ, ಮಗು ವಿಪರೀತ ಅಳಲು ಆರಂಭಿಸಿದೆ. ಇದರಿಂದ ಗಾಬರಿಗೊಂಡ ತಾಯಿ ಆ ಮಗುವನ್ನು ಅರ್ಧಂಬರ್ಧ ಮಣ್ಣಿನಿಂದ ಮುಚ್ಚಿ ಪರಾರಿಯಾಗಿದ್ದಾರೆ.
ದಾರಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಮಗುವಿನ ಅಳುತ್ತಿರುವ ಶಬ್ಧ ಕೇಳಿದೆ. ಮಗು ಅಳುತ್ತಿರುವ ಶಬ್ದದ ಕಡೆ ಮಹಿಳೆ ಹೋಗಿ ನೋಡಿದ್ದಾರೆ. ಅಲ್ಲಿ ಮಗುವನ್ನ ಮಣ್ಣಿನಲ್ಲಿ ಹೂತು ಹಾಕಿರುವುದನ್ನು ಕಂಡ ಮಹಿಳೆ ಬೆಚ್ಚಿಬಿದ್ದಿದ್ದಾರೆ.
ಓದಿ:ಹೊಸ ಟಿಬಿ ಲಸಿಕೆಗಾಗಿ ಬಯೋಫ್ಯಾಬ್ರಿ ಜೊತೆ ಕೈ ಜೋಡಿಸಿದ ಭಾರತ್ ಬಯೋಟೆಕ್
ನವಜಾತ ಶಿಶುವಿನ ದೇಹದ ಅರ್ಧ ಭಾಗವು ಹೊರಗೆ ಮತ್ತು ಅರ್ಧ ನೆಲದೊಳಗೆ ಇತ್ತು. ಕೂಡಲೇ ಈ ಘಟನೆ ಬಗ್ಗೆ ಜಿಲ್ಲಾಸ್ಪತ್ರೆಗೆ ಸುದ್ದಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆ ಸಿಬ್ಬಂದಿ ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು ಮಗುವಿನ ರಕ್ಷಣಾ ಕಾರ್ಯ ಕೈಗೊಂಡರು.
ಎಸ್‌ಐ ರಿಜ್ವಾನ್ ಅಲಿ, ಹೆಡ್‌ಕಾನ್ಸ್‌ಟೇಬಲ್ ಶೇಷ್‌ನಾಥ್, ಗೃಹರಕ್ಷಕ ದಳದ ಇಂದ್ರಮಣಿ ತ್ರಿಪಾಠಿ ಮಣ್ಣಿನಲ್ಲಿ ಹೂತು ಹಾಕಿದ್ದ ಮಗುವನ್ನು ಹೊರತೆಗೆದಿದ್ದಾರೆ. ತಕ್ಷಣ ಶಿಶುವನ್ನು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖಲಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸರ್ಫರಾಜ್ ಹಾಗೂ ಆಸ್ಪತ್ರೆ ಸಿಬ್ಬಂದಿ ನವಜಾತ ಶಿಶುವಿನ ಆರೈಕೆಯಲ್ಲಿ ತೊಡಗಿದರು. ವೈದ್ಯರು ಮತ್ತು ಸಿಬ್ಬಂದಿಯ ಅವಿರತ ಪ್ರಯತ್ನದಿಂದ ನವಜಾತ ಶಿಶುವಿನ ಜೀವ ಉಳಿಸಲಾಗಿದೆ. ಆ ಹೃದಯಹೀನ ತಾಯಿಯ ಈ ಕೃತ್ಯಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಮಗುವಿನ ಆರೈಕೆಗಾಗಿ ಚೈಲ್ಡ್ ಲೈನ್‌ಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.