ಸ್ನೇಹಿತನನ್ನು ಕೊಂದು ಸ್ಕೂಟಿಯಲ್ಲಿ ಶವ ಸಾಗಿಸುತ್ತಿರುವ ಯುವಕ ಗುವಾಹಟಿ/ಅಸ್ಸೋಂ : ಅಸ್ಸೋಂನ ರಾಜಧಾನಿ ಮತ್ತು ಈಶಾನ್ಯ ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಗುವಾಹಟಿ ನಗರದಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ. ನಗರದಲ್ಲಿ ಕೊಲೆ, ದರೋಡೆ, ಸರಗಳ್ಳತನ, ಮಾದಕ ದ್ರವ್ಯ ಸೇವನೆ ಘಟನೆಗಳು ದಿನನಿತ್ಯ ನಡೆಯುತ್ತಿವೆ. ಗುವಾಹಟಿಯ ನೂನ್ಮತಿ ಗಣೇಶ ಮಂದಿರ ರಸ್ತೆಯಲ್ಲಿ ಶನಿವಾರ ಮತ್ತೊಂದು ಆಘಾತಕಾರಿ ಕೊಲೆ ಪ್ರಕರಣ ನಡೆದಿದೆ.
ಮೂಲಗಳ ಪ್ರಕಾರ, ನೂನ್ಮತಿಯ ಗಣೇಶ ಮಂದಿರ ರಸ್ತೆಯಲ್ಲಿರುವ ಬಿಜಯ ಜ್ಯೋತಿ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ 3C ನ ಮೂರನೇ ಮಹಡಿಯಲ್ಲಿ ಒಬ್ಬ ಯುವಕನನ್ನು ಇನ್ನೊಬ್ಬ ಯುವಕ ಬರ್ಬರವಾಗಿ ಹೊಡೆದು ಕೊಂದಿದ್ದಾನೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿದ ಯುವಕನನ್ನು ಬಾಮುನಿಮೊಯ್ದನ್ ರೈಲ್ವೆ ಕಾಲೋನಿ ನಿವಾಸಿ ರೋಹಿತ್ ದರ್ಜಿ ಎಂದು ಗುರುತಿಸಲಾಗಿದೆ. ರೋಹಿತ್ ಇಡೀ ದಿನ ತನ್ನ ಸ್ನೇಹಿತ ಬಿಜಯ ಜ್ಯೋತಿ ಅಪಾರ್ಟ್‌ಮೆಂಟ್ ಮಾಲೀಕನ ಮಗ ಶುಭ್‌ಜಿತ್ ಬೋರಾ ಜೊತೆ ಕಳೆದಿದ್ದಾನೆ. ಶುಭ್‌ಜಿತ್ ರೋಹಿತ್‌ನನ್ನು ಕೊಂದು ಶವವನ್ನು ಮೂಲಕ ಗಣೇಶ ಮಂದಿರದ ರಸ್ತೆಯಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ನೆರೆಹೊರೆಯವರು ಇಡೀ ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಶುಭ್‌ಜಿತ್ ತನ್ನ ಸ್ಕೂಟಿಯ ಮೂಲಕ ಶವವನ್ನು ಸಾಗಿಸಲು ಪ್ರಯತ್ನಿಸಿದ್ದಾನೆ. ಆದರೆ ಆ ಸಮಯದಲ್ಲಿ ನೆರೆಹೊರೆಯವರು ಅವನನ್ನು ಗಮನಿಸಿದ್ದಾರೆ. ನಂತರ ಶವವನ್ನು ರಸ್ತೆಯಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ. ರೋಹಿತ್ ತಂದೆ ನೂನ್ಮತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಫ್ಲಾಟ್‌ನ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಸಂಗ್ರಹಿಸಿದ್ದು, ಶುಭ್‌ಜಿತ್ ಶವವನ್ನು ತನ್ನ ಸ್ಕೂಟಿಯಲ್ಲಿ ಸಾಗಿಸಲು ಪ್ರಯತ್ನಿಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಮಾದಕ ದ್ರವ್ಯ ಸೇವನೆಯಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಸುಭ್ರಜಿತ್ ಬೋರಾ ಇನ್ನೂ ತಲೆಮರೆಸಿಕೊಂಡಿದ್ದಾನೆ. ತನಿಖೆಯ ಸಲುವಾಗಿ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ಮಹಿಳೆಗೆ ಗುಂಡಿಕ್ಕಿ ಕೊಂದು ಹಂತಕರು ಪರಾರಿ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ (ಅಕ್ಟೋಬರ್-4-2023) ನಡೆದಿತ್ತು. ಗುಂಡು ಹಾರಿಸಿದ ಬಳಿಕ ಹಂತಕರು ಬೈಕ್‌ನಲ್ಲಿ ಪರಾರಿಯಾಗಿದ್ದರು. ಸಿಸಿಟಿವಿಯಲ್ಲಿ ಭೀಕರ ದೃಶ್ಯಗಳು ಸೆರೆಯಾಗಿದ್ದು, ಜನತೆಯನ್ನು ಬೆಚ್ಚಿ ಬೀಳಿಸುವಂತಿತ್ತು.
ಹತ್ಯೆಗೀಡಾದ ಮಹಿಳೆಯನ್ನು ಸಾಜಿದಾ ಆಫ್ರಿನ್ (35) ಎಂದು ಗುರುತಿಸಲಾಗಿತ್ತು. ಮಂಗಳವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಾವಾರ ಅಲಿ ಮಿರ್ಜಾ ರಸ್ತೆಯಲ್ಲಿ ಸಾಜಿದಾ ನಡೆದುಕೊಂಡು ಹೋಗುತ್ತಿದ್ದರು. ಮೊದಲೇ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ದುಷ್ಕರ್ಮಿಗಳು ಆಕೆ ಸಾಗುವ ಹಾದಿಯಲ್ಲಿ ಬೈಕ್‌ನಲ್ಲಿ ಬಂದು ನಿಂತಿದ್ದರು. ತನ್ನ ಪಾಡಿಗೆ ತಾನು ತೆರಳುತ್ತಿದ್ದಾಗ ಹಿಂದಿನಿಂದ ಓರ್ವ ಹಿಂಬಾಲಿಸುತ್ತಾನೆ. ಇದೇ ದಾರಿಯಲ್ಲಿ ಸ್ವಲ್ಪ ಮುಂದೆ ಮತ್ತೋರ್ವ ಬೈಕ್ ಮೇಲೆ ನಿಂತಿದ್ದ. ಆಗ ಸಮಯ ಸಾಧಿಸಿ ಹಿಂಬಾಲಕ ದುಷ್ಕರ್ಮಿ ಆಕೆಯ ತಲೆಗೆ ನೇರವಾಗಿ ಗುಂಡು ಹಾರಿಸುತ್ತಾನೆ. ಸಾಜಿದಾ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ನಂತರ ಬೈಕ್‌ನಲ್ಲಿ ಇಬ್ಬರೂ ಪರಾರಿಯಾಗುತ್ತಾರೆ.
ಇದನ್ನೂ ಓದಿ:ಮಹಿಳೆಗೆ ಗುಂಡಿಕ್ಕಿ ಕೊಂದು ಹಂತಕರು ಪರಾರಿ; ಬಿಹಾರದಲ್ಲಿ ನಡೆದ ಭಯಾನಕ ಘಟನೆಯ ಲೈವ್ ವಿಡಿಯೋ!