ನಾಸಿಕ್(ಮಹಾರಾಷ್ಟ್ರ):ಭಾರತ ಒಂದೆಡೆ ಆಧುನಿಕ ತಂತ್ರಜ್ಞಾನದತ್ತ ಸಾಗುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಮೂಢನಂಬಿಕೆ ಇಂದಿಗೂ ಜೀವಂತವಾಗಿದೆ. ಅಂತಹ ಘಟನೆವೊಂದು ಇದೀಗ ಮಹಾರಾಷ್ಟ್ರದ ನಾಶಿಕ್ನಲ್ಲಿ ನಡೆದಿದೆ. ಋತುಮತಿಯಾದ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಸಸಿ ನೆಡದಂತೆ ಶಿಕ್ಷಕಿಯೊಬ್ಬರು ಆದೇಶ ಹೊರಡಿರುವ ಘಟನೆ ನಡೆದಿದೆ. ಈ ಬಗ್ಗೆ ವಿದ್ಯಾರ್ಥಿನಿ ಈ ಟಿವಿ ಭಾರತದ ಮುಂದೆ ತಮ್ಮ ಅಳಲು ಹೇಳಿಕೊಂಡಿದ್ದಾರೆ.
ನಾಸಿಕ್ನ ತ್ರಯಂಬಕೇಶ್ವರ ತಾಲೂಕಿನ ದೇವಗಾಂವ್ನ ಸರ್ಕಾರಿ ಬಾಲಕಿಯ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಳೆಯಾಗುತ್ತಿರುವ ಕಾರಣ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಶಿಕ್ಷಕಿ ಆರ್ಟಿ ದೇವರೆ ಭಾಗಿಯಾಗಿದ್ದರು. ಋತುಮತಿಯಾದ ವಿದ್ಯಾರ್ಥಿನಿಯರು ಸಸಿ ನೆಡಬಾರದು ಎಂಬ ವಿಚಿತ್ರ ಆದೇಶ ಹೊರಡಿಸಿದ್ದಾರೆ. ಶಿಕ್ಷಕಿಯ ಈ ಆದೇಶ ಕೇಳಿ ಕೆಲ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ. ಜೊತೆಗೆ ಅವಮಾನಕ್ಕೊಳಗಾಗಿದ್ದಾರೆ.