ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ 15 ವರ್ಷ 11 ದಿನ ಪೂರೈಸಿ, ಬಿಜೆಪಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ 15 ವರ್ಷ 10 ದಿನ ಮುಖ್ಯಮಂತ್ರಿಯಾಗಿದ್ದ ಛತ್ತೀಸ್ಗಢದ ಡಾ.ರಮಣ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ 2005ರ ನವೆಂಬರ್ 29ರಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2018ರ ಡಿಸೆಂಬರ್ 12 ರವರೆಗೆ ಮುಖ್ಯಮಂತ್ರಿಯಾಗಿ ಸತತವಾಗಿ ಮುಂದುವರಿದಿದ್ದರು. 2018ರಲ್ಲಿ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷೇತರರ ಸಹಕಾರದಿಂದ ಚೌಹಾಣ್ ಸರ್ಕಾರವನ್ನ ಕೆಡವಿ ಅಧಿಕಾರಕ್ಕೆ ಏರಿತ್ತು. ಆದರೆ ಕಾಂಗ್ರೆಸ್ ಒಳಜಗಳದಿಂದಾಗಿ 22 ಶಾಸಕರು ಒಟ್ಟಾಗಿ ರಾಜೀನಾಮೆ ನೀಡಿದ ಕಾರಣ ಕಮಲ್ ನಾಥ್ ನೇತೃತ್ವದ ಸರ್ಕಾರ ಪತನವಾಗಿತ್ತು. 2020 ಮಾರ್ಚ್ 23ರಂದು ಚೌಹಾಣ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಶಿವರಾಜ್ ಚೌಹಾಣ್ ಅವರು ತಳಮಟ್ಟದಿಂದ ಉತ್ತುಂಗಕ್ಕೆ ಬೆಳೆದು ಬಂದ ನಾಯಕರಾಗಿದ್ದಾರೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ, ರಾಜ್ಯದ ಸೆಹೋರ್ ಜಿಲ್ಲೆಯ ಸಣ್ಣ ಜೈಟ್ ಗ್ರಾಮದಿಂದ ಬಂದು 4 ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದಾರೆ. ಶಿವರಾಜ್ ಚೌಹಾಣ್ ಅವರು 9 ವರ್ಷದವರಾಗಿದ್ದಾಗಲೇ ಗ್ರಾಮದ ಕೂಲಿ ಕಾರ್ಮಿಕರಿಗೆ ದುಪ್ಪಟ್ಟು ಕೂಲಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು. ಇದೇ ಅವರ ಒಂದು ರೀತಿಯ ರಾಜಕೀಯ ಜೀವನದ ಆರಂಭ ಎಂದರೂ ತಪ್ಪಾಗಲಾರದು. ಶಿವರಾಜ್ ಸಿಂಗ್ ಚೌಹಾಣ್ ತಮ್ಮ ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ಕಾಲ್ನಡಿಗೆಯಲ್ಲೇ ಹಳ್ಳಿ ಹಳ್ಳಿಗೆ ಪ್ರಯಾಣಿಸುತ್ತಿದ್ದರು.