ಲೂಧಿಯಾನ (ಪಂಜಾಬ್): ಕೆಲಸ ಯಾವುದೇ ಇರಲಿ. ಅದನ್ನು ಚಿಕ್ಕದು ದೊಡ್ಡದು ಎಂದು ಪರಿಗಣಿಸುವ ವ್ಯಕ್ತಿಗಳಿರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಚಿಕ್ಕ ಕೆಲಸದಿಂದ ತನ್ನ ಜೀವನವನ್ನು ಪ್ರಾರಂಭಿಸಿ, ದೊಡ್ಡ ಹುದ್ದೆಯತ್ತಾ ಮುಖ ಮಾಡಿದ್ದಾರೆ. ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಗೋಲ್‌ಗೊಪ್ಪ ಮಾರಾಟ ಮಾಡಿ, ತನ್ನ ಶಿಕ್ಷಣದ ಖರ್ಚನ್ನು ತಾನೇ ನೋಡಿಕೊಳ್ಳುತ್ತಿರುವ ಯುವಕ ಶಿವಲಿಗ್‌ನದ್ದು ಮಾದರಿ ವ್ಯಕ್ತಿತ್ವ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಯುಜಿಸಿ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದೀಗ ರಾಜ್ಯ ಸರ್ಕಾರ ನಡೆಸಿದ ಪರೀಕ್ಷೆಯನ್ನೂ ಬರೆದು ಪ್ರೊಫೆಸರ್ ಹುದ್ದೆಗೇರಿದ್ದಾರೆ.
'ನಾನೆಂದೂ ಈ ಕೆಲಸವನ್ನು ಬಿಡುವುದಿಲ್ಲ': ಪ್ರೊಫೆಸರ್ ಆಗಿದ್ದರೂ ಸಂಜೆಯ ಬಿಡುವಿನ ವೇಳೆ ಗೋಲ್‌ಗೊಪ್ಪ ಮಾರಾಟದಲ್ಲಿ ತೊಡಗುತ್ತೇನೆ. ಈ ದುಡಿಮೆಯಿಂದಲೇ ಇಂದು ಇದೆಲ್ಲ ಮಾಡಲು ಸಾಧ್ಯವಾಗಿದೆ. ನಾನು ಈ ಕೆಲಸವನ್ನೆಂದು ಚಿಕ್ಕದಾಗಿ ಪರಿಗಣಿಸಿಲ್ಲ ಎಂದ ಶಿವಲಿಗ್ ತಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ.
ನಾನು ಚಿಕ್ಕವನಿರುವಾಗಲೇ ತಂದೆ ಕೆಲಸ ಬಿಟ್ಟರು. ಆ ಸಮಯದಲ್ಲಿ ಮನೆಯ ಆರ್ಥಿಕ ಪರಿಸ್ಥಿತಿಯೂ ಹದೆಗೆಟ್ಟಿತ್ತು. ಹೀಗಾಗಿ ನಾನು ಬೆಳಗ್ಗೆ ಬೇಗ ಎದ್ದು ಓದು ಮುಗಿಸಿ ಶಾಲೆಗೆ ಹೋಗುತ್ತಿದ್ದೆ. ಸಂಜೆ ಬಂದು ಗೋಲ್ಗೊಪ್ಪಕ್ಕೆ ಬೇಕಾದ ಸಿದ್ದತೆಯನ್ನು ಮಾಡಿಕೊಂಡು ಮಾರಾಟ ಆರಂಭಿಸುತ್ತಿದೆ. ನನ್ನ ಶಾಲೆಯಲ್ಲಿನ ಮಕ್ಕಳೆಲ್ಲರೂ ಕಾರು, ಬೈಕ್ನಲ್ಲಿ ಬರುತ್ತಿದ್ದರು. ಆದರೆ ನಾನೊಬ್ಬನೇ ಸೈಕಲ್ನಲ್ಲಿ ತೆರಳುತ್ತಿದ್ದೆ.
ಕೆಲವು ಮಕ್ಕಳು ನನ್ನನ್ನು ಗೇಲಿ ಮಾಡಿ ನಗುತ್ತಿದ್ದರು. ಇನ್ನು ಕೆಲವರು ನನ್ನೊಂದಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಹೀಗಾಗಿಯೇ ನಾನಿವತ್ತೂ ಇಲ್ಲಿಗೆ ತಲುಪಿದ್ದೇನೆ. ನನಗಾಗಿ ತಾಯಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಅವರ ಎಲ್ಲಾ ಕನಸುಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.
ಪ್ರಾಂಶುಪಾಲರಿಂದ ಅಭಿನಂದನೆ: ಶಿವಲಿಗ್ ಸಾಧನೆ ನಿಜಕ್ಕೂ ಖುಷಿ ತಂದುಕೊಟ್ಟಿದೆ. ಇವನು ನಮ್ಮ ಶಾಲೆಯ ವಿದ್ಯಾರ್ಥಿ ಎಂಬುದೇ ನಮಗೆ ಹೆಮ್ಮೆ. ಇವನ ಸಾಧನೆಗಳು ಅನೇಕ ಮಂದಿಗೆ ಸ್ಪೂರ್ತಿಯಾಗಲಿ ಎಂದು ಲೂಧಿಯಾನ ಜವಾಡಿ ಸರ್ಕಾರಿ ಶಾಲೆಯ ಪ್ರಾಂಶುಪಾಲ ಕಿರಣ್ ಗುಪ್ತಾ ಶುಭಹಾರೈಸಿದ್ದಾರೆ.
ಇದನ್ನೂ ಓದಿ:2 ಲಕ್ಷದ ಕನಸಿನ ಬೈಕ್ನ್ನು ಒಂದು ರೂಪಾಯಿ ನಾಣ್ಯಗಳನ್ನೇ ಪಾವತಿಸಿ ಖರೀದಿಸಿದ ಯುವಕ!