ಕರ್ನಾಟಕ

karnataka

ಬೆಂಗಳೂರು ಶಿವಾಜಿ ಪ್ರತಿಮೆ ವಿವಾದ: ಮಧ್ಯ ಪ್ರವೇಶಿಸುವಂತೆ ಪ್ರಧಾನಿಗೆ ಉದ್ಧವ್​ ಠಾಕ್ರೆ ಪತ್ರ

By

Published : Dec 19, 2021, 3:31 AM IST

ಬೆಂಗಳೂರಿನ ಸ್ಯಾಂಕಿಟ್ಯಾಂಕ್​ ರಸ್ತೆಯಲ್ಲಿನ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Uddhav Thackeray Writes To PM Modi
Uddhav Thackeray Writes To PM Modi

ಮುಂಬೈ(ಮಹಾರಾಷ್ಟ್ರ): ಬೆಂಗಳೂರಿನ ಶಿವಾಜಿನಗರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದಾರೆ.

17ನೇ ಶತಮಾನದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನ ಬೆಂಗಳೂರಿನಲ್ಲಿ ಅಪವಿತ್ರಗೊಳಿಸಲಾಗಿದೆ. ಕರ್ನಾಟಕ ಸರ್ಕಾರ ತಕ್ಷಣವೇ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದಿರುವ ಅವರು, ಕನ್ನಡಿಗರ ದೌರ್ಜನ್ಯ ಮತ್ತು ವಿಕೃತಿ ಮನಸ್ಥಿತಿ ತಡೆಯಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದಿದ್ದಾರೆ.

ಮರಾಠ ಸಾಮ್ರಾಜ್ಯದ ಸಂಸ್ಥಾಪಕರಾದ ಶಿವಾಜಿ ಮಹಾರಾಜರಿಗೆ ಯಾವುದೇ ರೀತಿಯ ಅಗೌರವ ಮತ್ತು ಅವಮಾನ ಮಾಡುವುದನ್ನ ಸಹಿಸಲಾಗುವುದಿಲ್ಲ ಎಂದಿರುವ ಠಾಕ್ರೆ, ಪ್ರತಿಮೆಗೆ ಮಸಿ ಬಳಿದಿರುವುದು ಕನ್ನಡಿಗರ ವಿಕೃತ ಮನಸ್ಥಿತಿ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದೀಗ ಶಿವಾಜಿ ಪ್ರತಿಮೆ ಅಪವಿತ್ರಗೊಳಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ:ಎಂಇಎಸ್ ಪುಂಡಾಟಿಕೆ : ಕನ್ನಡ ಪರ ಸಂಘಟನೆಗಳಿಂದ ಇಂದು ಬೆಳಗಾವಿ ಚಲೋ ಕಾರ್ಯಕ್ರಮ

ಶಿವಾಜಿ ಇಲ್ಲದಿದ್ರೆ ಭಾರತದ ಸಂಸ್ಕೃತಿ ಊಹಿಸಲೂ ಅಸಾಧ್ಯ ಎಂದು ಕಳೆದ ಕೆಲ ದಿನಗಳ ಹಿಂದೆ ವಾರಣಾಸಿಯಲ್ಲಿ ನೀವೂ ಹೇಳಿದ್ದೀರಿ. ಆದರೆ ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಅಪವಿತ್ರಗೊಳಿಸಲಾಗಿದೆ. ಇದು ಖಂಡನೀಯ. ಈ ದೌರ್ಜನ್ಯ ನಿಲ್ಲಿಸಲು ತಕ್ಷಣವೇ ಮಧ್ಯಸ್ಥಿಕೆ ವಹಿಸಿ ಎಂದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್​ ಶಿಂಧೆ, ಪ್ರತಿಮೆಗೆ ಮಸಿ ಎರಚಿದ ಘಟನೆಗೆ ಕರ್ನಾಟಕ ಸರ್ಕಾರವೇ ಹೊಣೆ ಎಂದಿದ್ದಾರೆ.

ABOUT THE AUTHOR

...view details