ಮುಂಬೈ/ದೆಹಲಿ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಬಂಡಾಯ ಶಾಸಕರ(ಶಿವಸೇನೆ) ಗುಂಪು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಬಂಡಾಯ ಸಚಿವ, ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂದೆ ಗುಂಪು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ. ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಏಕನಾಥ್ ಶಿಂಧೆ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಮಹಾವಿಕಾಸ್ ಅಘಾಡಿಯನ್ನು ಪ್ರತಿನಿಧಿಸಲಿದ್ದಾರೆ.
16 ಬಂಡಾಯ ಶಾಸಕರಿಗೆ ಅನರ್ಹತೆ ಮತ್ತು ಗುಂಪಿನ ನಾಯಕರ(ಏಕನಾಥ್ ಶಿಂದೆ) ಕ್ರಮಕ್ಕೆ ವಿಧಾನಸಭೆ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ನೋಟಿಸ್ ಕಳುಹಿಸಿರುವುದನ್ನು ಪ್ರಶ್ನಿಸಿ ಶಿಂದೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇಂದು ವಿಚಾರಣೆ ನಡೆಯಲಿದೆ.
ಶಿಂದೆ ಬಂಡಾಯ ಸಾರಿರುವ ಹಿನ್ನೆಲೆಯಲ್ಲಿ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಿ, ಈ ಸ್ಥಾನಕ್ಕೆ ಆಜಯ್ ಚೌಧರಿ ಅವರನ್ನು ನೇಮಿಸಲಾಗಿದೆ. ನರಹರಿ ಜಿರ್ವಾಲ್ ಅವರು 16 ಬಂಡಾಯ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 48 ಗಂಟೆಯೊಳಗೆ(ಇಂದು ಸಂಜೆ 5 ಗಂಟೆಯೊಳಗೆ) ಉತ್ತರ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ವಿಷಯದ ವಿರುದ್ಧ ಶಿಂದೆ ಗುಂಪು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಅರ್ಜಿಯಲ್ಲೇನಿದೆ:
- ಅಜಯ್ ಚೌಧರಿ ನೇಮಕಕ್ಕೆ ಆಕ್ಷೇಪ.
- ಬಂಡಾಯ 16 ಶಾಸಕರನ್ನು ಅನರ್ಹಗೊಳಿಸುವುದಕ್ಕೆ ವಿರೋಧ
- ಶಿಂದೆ ಗುಂಪಿನ ಶಾಸಕರಿಗೆ ಪೊಲೀಸ್ ರಕ್ಷಣೆಗೆ ಒತ್ತಾಯ
ಅರವಿಂದ್ ಸಾವಂತ್ ಹೇಳಿಕೆ:ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನೆ ಶಾಸಕಾಂಗಕ್ಕೆ ಪತ್ರ ನೀಡಿದ್ದರೆ, ಇತ್ತ ಶಿವಸೇನೆ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಿದೆ. 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಶಾಸಕಾಂಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಿಧಾನಸಭೆ ಉಪಸಭಾಪತಿಯವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಆದರೀಗ ಈ ಕದನ ರಾಜಕೀಯ ಮಾತ್ರವಲ್ಲ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ ಈ ಕದನವೀಗ ನ್ಯಾಯಾಲಯದಲ್ಲಿಯೂ ನಡೆಯಲಿದೆ ಎಂದು ಶಿವಸೇನಾ ಸಂಸದ ಅರವಿಂದ್ ಸಾವಂತ್ ಮುಂಬೈನಲ್ಲಿ ಹೇಳಿಕೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ 'ಮಹಾ' ಕದನ: ಶಿವಸೇನೆ ತೊರೆದ ಶಾಸಕರು ಇನ್ನೂ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಸದ್ಯ ಅವರನ್ನು ಶಿವಸೇನೆಯ ಬಂಡಾಯ ಶಾಸಕರು ಎಂದು ಪರಿಗಣಿಸಲಾಗುವುದು. ಹಾಗಾಗಿ ಅವರು ಕ್ರಮಕ್ಕೆ ಅರ್ಹರು ಎಂದು ಹಿರಿಯ ವಕೀಲ ದೇವದತ್ ಕಾಮತ್ ಹೇಳಿದ್ದಾರೆ. ಈ ಶಾಸಕರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಕ್ರಮ ಕೈಗೊಳ್ಳಲು ಶಿವಸೇನೆ ಸಿದ್ಧತೆ ನಡೆಸಿದೆ. ಅಲ್ಲದೇ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ಪಕ್ಷದ ಮುಖಂಡರಿಗೆ ಇದೆ. ಕಾನೂನು ಕೂಡ ಆ ಹಕ್ಕನ್ನು ನೀಡಿದೆ. ಹಾಗಾಗಿ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.
ಸರ್ಕಾರದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ಉಪಾಧ್ಯಕ್ಷರಿಗೂ ಇಮೇಲ್ ಬಂದಿದೆ. ಆದರೆ, ಇದು ಮಾನ್ಯ ಇ-ಮೇಲ್ ಮೂಲಕ ಬಂದಿಲ್ಲ, ಹಾಗಾಗಿ ಅದರ ಸತ್ಯಾಸತ್ಯತೆ ಅನುಮಾನವಾಗಿದೆ. ಕೊರಿಯರ್ ಮೂಲಕವೂ ಲಿಖಿತ ಪತ್ರ ಬಂದಿದೆ. ಆದರೆ, ವಿಧಾನಸಭೆ ಉಪಸಭಾಪತಿ ಇದನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಈಗ ಪಕ್ಷದ ಶಿಸ್ತು ಉಲ್ಲಂಘಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ನ್ಯಾಯಾಲಯದ ಮೂಲಕ ಪ್ರಾರಂಭಿಸಲಾಗುವುದು ಎಂದು ದೇವದತ್ ಕಾಮತ್ ಹೇಳಿದರು.
ವಾದವೇನು?ಏಕನಾಥ್ ಶಿಂದೆ ಗುಂಪಿನ 16 ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನೆ ವಕ್ತಾರ ಸುನೀಲ್ ಪ್ರಭು ಆಗ್ರಹಿಸಿದ್ದರು. ಈ ಕುರಿತು ಚರ್ಚಿಸಲು ಶಿವಸೇನೆ ನಿಯೋಗ ವಿಧಾನಸಭೆಯ ಉಪಸಭಾಪತಿ ನರಹರಿ ಜಿರ್ವಾಲ್ ಅವರನ್ನು ಭೇಟಿ ಮಾಡಿತ್ತು. ಜೂ.25ರಂದು ಮಧ್ಯಾಹ್ನ ಆರಂಭವಾದ ಶಾಸಕಾಂಗ ಸಭೆ ಆರು ಗಂಟೆಗಳ ಕಾಲ ನಡೆದಿದ್ದು, ಸಭೆಯ ನಂತರ 16 ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಇದನ್ನೂ ಓದಿ:ರಾಜ್ ಠಾಕ್ರೆ ಜತೆ ಏಕನಾಥ ಶಿಂದೆ ಎರಡೆರಡು ಬಾರಿ ಮಾತುಕತೆ: ತೀವ್ರ ಕುತೂಹಲ ಕೆರಳಿಸಿದ ಬಂಡಾಯ ನಾಯಕನ ನಡೆ
ಇಂದು 16 ಬಂಡಾಯ ಶಾಸಕರು ವಿಧಾನಸಭೆಯ ಉಪ ಸ್ಪೀಕರ್ ಮುಂದೆ ತಮ್ಮ ವಾದವನ್ನು ಮಂಡಿಸಬೇಕಾಗಿದ್ದು, ಸದ್ಯ ಅವರೆಲ್ಲರೂ ಗುವಾಹಟಿಯಲ್ಲಿದ್ದಾರೆ. ಇಂದು ಸಂಜೆಯೊಳಗೆ ಅಭಿಪ್ರಾಯ ಮಂಡಿಸುವಂತೆ ಸೂಚಿಸಲಾಗಿದೆ. ಬಂಡಾಯ ಶಾಸಕರ ಉತ್ತರದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಿವಸೇನೆ ಮುಖ್ಯ ವಕ್ತಾರ ಅರವಿಂದ್ ಸಾವಂತ್ ಹೇಳಿದ್ದಾರೆ.