ನವದೆಹಲಿ:ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿರುವ ಕೇಂದ್ರ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಇದೇ ವೇಳೆ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿ ಸಂಬಂಧ ಉತ್ತರಿಸುವಂತೆ ಶಿಂಧೆ ಬಣಕ್ಕೆ ಸರ್ವೋಚ್ಛ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಶಿವಸೇನೆ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯಾದ ಬಿಲ್ಲು-ಬಾಣವನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡುವ ಆಯೋಗದ ಆದೇಶ ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಮೆಟ್ಟಿಲೇರಿದೆ. ಇಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಚು.ಆಯೋಗದ ಆದೇಶಕ್ಕೆ ಈ ಸಂದರ್ಭದಲ್ಲಿ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಆದರೆ, ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗದ ಆದೇಶ ಹೊರತಾಗಿ, ನಾವು ಬೇರೆ ಕ್ರಮಗಳನ್ನು ಕೈಗೊಂಡರೆ ಕಾನೂನಿನ ಇತರ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಉದ್ಧವ್ ಠಾಕ್ರೆ ಬಣಕ್ಕೆ ಸುಪ್ರೀಂ ಸ್ಪಷ್ಟನೆ ನೀಡಿದೆ. ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿಕೆ ಮಾಡಲಾಗಿದೆ.
ಸುಪ್ರೀಂನಲ್ಲಿ ವಿಚಾರಣೆ:ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲ ನೇತೃತ್ವದ ಪೀಠದಲ್ಲಿ ಈ ವಿಚಾರಣೆ ನಡೆಯಿತು. ನ್ಯಾಯಪೀಠವು, ನಾವು ಉದ್ಧವ್ ಠಾಕ್ರೆ ಸಲ್ಲಿಸಿದ ನಾವು ಅರ್ಜಿಯನ್ನು ಪರಿಗಣಿಸುತ್ತೇವೆ. ಈ ಕುರಿತಾಗಿ ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತೇವೆ ಎಂದು ಹೇಳಿತು.
ಇದೇ ವೇಳೆ ಶಿಂಧೆ ಬಣವನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರಿಗೆ ಮುಖ್ಯ ನ್ಯಾಯಮೂರ್ತಿಗಳು, ಈ ವಿಚಾರಣೆಯನ್ನು ನಾವು ಇದನ್ನು ಎರಡು ವಾರಗಳ ನಂತರ ಎತ್ತಿಕೊಂಡರೆ ನೀವು ಶಾಸಕರಿಗೆ ವಿಪ್ ನೀಡುವ ಅಥವಾ ಅನರ್ಹಗೊಳಿಸುವ ಪ್ರಕ್ರಿಯೆಯಲ್ಲಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಆಗ ವಕೀಲ ಕೌಲ್ ಇಲ್ಲ ಎಂದು ಉತ್ತರಿಸಿದರು. ಹಾಗಾದರೆ, ನಾವು ನಿಮ್ಮ ಹೇಳಿಕೆಯನ್ನು ದಾಖಲಿಸುತ್ತೇವೆ ಎಂದು ಸಿಜೆಐ ತಿಳಿಸಿದರು.
ಇದಕ್ಕೂ ಮುನ್ನ ಉದ್ಧವ್ ಠಾಕ್ರೆ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಅವರು (ಸಿಂಧೆ ಬಣ) ನಮ್ಮ ಬ್ಯಾಂಕ್ ಖಾತೆಗಳು, ಆಸ್ತಿ ಇತ್ಯಾದಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಆಕ್ಷೇಪ ಎತ್ತಿದರು. ಆದರೆ, ಶಿವಸೇನೆಯ ಆಸ್ತಿಗಳು ಮತ್ತು ಹಣಕಾಸು ಸ್ವಾಧೀನಪಡಿಸಿಕೊಳ್ಳದಂತೆ ಶಿಂಧೆ ಬಣವನ್ನು ತಡೆಯಲು ನ್ಯಾಯ ಪೀಠ ತಿಳಿಸಿತು. ಈ ಕ್ರಮವು ಚುನಾವಣಾ ಆಯೋಗದ ಆದೇಶವನ್ನು ತಡೆ ಹಿಡಿದಂತೆ ಆಗುತ್ತದೆ. ಆಯೋಗದಲ್ಲಿ ಅವರು (ಸಿಂಧೆ ಬಣ) ಯಶಸ್ವಿಯಾಗಿರುವುದರಿಂದ ನಾವು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಮುಂದುವರೆದು, ಠಾಕ್ರೆ ಪರ ವಕೀಲರು, ಶಿಂಧೆ ಬಣವನ್ನು ಮೂಲ ಶಿವಸೇನೆ ಎಂದು ಕರೆಯಲಾಗಿದ್ದು, ಅದರ ಪರವಾಗಿ ಮತ ಹಾಕುವಂತೆ ಈಗ ಶಾಸಕರಿಗೆ ವಿಪ್ ಜಾರಿ ಮಾಡಲಿದೆ. ಒಂದು ವೇಳೆ ವಿಫಲವಾದರೆ ಶಾಸಕರ ವಿರುದ್ಧ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು ಎಂದು ವಾದ ಮಾಡಿದರು. ಆಗ ಶಿಂಧೆ ಬಣದ ವಕೀಲರು ಈ ವಿಷಯದ ಬಗ್ಗೆ ನಾವು ಅವಸರ ಮಾಡುವುದಿಲ್ಲ ಎಂದು ಹೇಳಿದರು.
ಇನ್ನೂ ಓದಿ:ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್ ಕೈ ಜಾರಿದ ಬಿಲ್ಲು-ಬಾಣ