ನಾಗ್ಪುರ(ಮಹಾರಾಷ್ಟ್ರ):ದೇಶದಾದ್ಯಂತ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ ನಾಲ್ಕು ತಿಂಗಳ ಬಳಿಕ ಬೆಲೆ ಏರಿಕೆಯಾಗುತ್ತಿದ್ದು, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಲೆ ಏರಿಕೆಯನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ನಾಗ್ಪುರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಮತ್ತು ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸಿದರು.
ನಗರದ ಗೋಲಿಬಾರ್ ಚೌಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು ಇಂಧನ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು. ಕೇಂದ್ರ ಸರ್ಕಾರ ತಮ್ಮ ಒತ್ತಾಯವನ್ನು ಪರಿಗಣಿಸದಿದ್ದರೆ 'ರೈಲ್ ರೋಕೋ' ಆಂದೋಲನ ನಡೆಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಶಿವಸೇನೆ ನಾಯಕ ಸೂರಜ್ ಗೋಜೆ ಮಾತನಾಡಿ, ಕೇಂದ್ರವು ಸಾಮಾನ್ಯ ನಾಗರಿಕರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿಯ ದೇಶಭಕ್ತಿ ಮತ್ತು ಹಿಂದುತ್ವದ ಸುಳ್ಳು ಘೋಷಣೆಗಳಿಂದ ಜನರು ಮೋಸ ಹೋಗಿದ್ದಾರೆ. ಕೇಂದ್ರವು ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ಶಿವ ಸೇನಾ ಕಾರ್ಯಕರ್ತರು 'ರೈಲ್ ರೋಕೋ' ಪ್ರಾರಂಭಿಸುತ್ತಾರೆಂದು ಎಚ್ಚರಿಸಿದರು.
ಇದನ್ನೂ ಓದಿ:ಗ್ಯಾಸ್, ಪೆಟ್ರೋಲ್, ಡೀಸೆಲ್ ಏರಿಕೆ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ: ಲೋಕಸಭೆ - ರಾಜ್ಯಸಭೆ ಕಲಾಪ ಮುಂದೂಡಿಕೆ
ನಾಲ್ಕೂವರೆ ತಿಂಗಳ ಬಳಿಕ ಕಳೆದೆರಡು ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂಪಾಯಿ ಹಾಗೂ ಪೆಟ್ರೋಲ್, ಡೀಸೆಲ್ ಲೀಟರ್‌ಗೆ ತಲಾ 80 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು 96.21 ರೂ.ನಿಂದ 97.01 ರೂ. ಏರಿಕೆಯಾಗಿದೆ. ಡೀಸೆಲ್ ದರಗಳು ಲೀಟರ್‌ಗೆ 88.27 ರೂಪಾಯಿಂದ 86.67 ಕ್ಕೆ ಜಿಗಿದಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 111.67 ರೂ. ಹಾಗೂ ಡೀಸೆಲ್ 95.85 ರೂಪಾಯಿಗೆ ತಲುಪಿದೆ.