ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ. ಈ ನಡುವೆ ಶಿವಸೇನೆ ನಾಯಕ, ಸಂಸದ ಸಂಜಯ್ ರಾವುತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಹಾ ವಿಕಾಸ್ ಆಘಾಡಿ ಮೈತ್ರಿಯಿಂದ ಹೊರಬರಲು ಉದ್ಧವ್ ಠಾಕ್ರೆ ಬಣ ಸಿದ್ಧವಾಗಿದೆ. ಆದರೆ, ಪಕ್ಷದ ಬಂಡಾಯ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಬರಬೇಕೆಂದು ಷರತ್ತು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಶಾಸಕರು ಗುವಾಹಟಿಯಿಂದ ಮಾತುಕತೆ ನಡೆಸಬಾರದು. ಅವರು ಮುಂಬೈಗೆ ಬಂದು ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು. ಇದು ಎಲ್ಲ ಶಾಸಕರ ಇಚ್ಛೆಯಾಗಿದ್ದರೆ, ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಹೊರಬರುವುದನ್ನು ಪರಿಗಣಿಸಲು ನಾವು ಸಿದ್ಧ. ಆದರೆ ಅದಕ್ಕಾಗಿ ಶಾಸಕರು ಮುಂಬೈಗೆ ಬಂದು ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಬೇಕೆಂದು ಹೇಳಿದ್ದಾರೆ.
ಇದೇ ವೇಳೆ, ಗುವಾಹಟಿಯ 21 ಶಾಸಕರು ಉದ್ಧವ್ ಠಾಕ್ರೆ ಬಣವನ್ನು ಸಂಪರ್ಕಿಸಿದ್ದಾರೆ. ಮುಂಬೈಗೆ ಮರಳಿದ ನಂತರ ಆ ಶಾಸಕರು ನಮ್ಮೊಂದಿಗೆ ಇರಲಿದ್ದಾರೆ ಎಂದು ರಾವುತ್ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ ಬಂಗಲೆ' ಅತಿ ಶೀಘ್ರದಲ್ಲಿ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ.