ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಮುಖ್ಯ ಕಾರಣ ಬಿಜೆಪಿ ಎಂದು ಈಗಾಗಲೇ ಉದ್ಧವ್ ಠಾಕ್ರೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದರ ಮಧ್ಯೆ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದು ಬಹುತೇಕ ಫೈನಲ್ ಆಗಿದೆ. ಮಾತೋಶ್ರೀಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ 16 ಸಂಸದರು ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ಹೇಳಿಕೊಂಡಿದ್ದಾರೆ.
ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಶಿವಸೇನೆಯ 16 ಸಂಸದರು ಭಾಗಿಯಾಗಿದ್ದರು. ಇವರೆಲ್ಲರೂ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆಂದು ಶಿವಸೇನೆಯ ಸಂಸದೆ ಗಜಾನನ ಕೀರ್ತಿಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರನ್ನ ನಾವು ಬೆಂಬಲಿಸಿದ್ದೆವು.
ಇದಾದ ಬಳಿಕ ಪ್ರಣಬ್ ಮುಖರ್ಜಿ ಅವರಿಗೂ ನಾವು ಬೆಂಬಲ ಘೋಷಣೆ ಮಾಡಿದ್ದೆವು. ಇದೀಗ ಉದ್ಧವ್ ಜೀ ಬುಡಕಟ್ಟು ಮಹಿಳೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡಲಿದ್ದು, ಮುಂದಿನ ಎರಡು ದಿನಗಳಲ್ಲಿ ಉದ್ಧವ್ ಠಾಕ್ರೆ ತಮ್ಮ ನಿರ್ಧಾರ ಹೊರಹಾಕಲಿದ್ದಾರೆ ಎಂದರು.