ಮುಂಬೈ(ಮಹಾರಾಷ್ಟ್ರ):ಶಿವಸೇನೆ ಪಕ್ಷದಲ್ಲಿ ಬಂಡಾಯ ಕಾಣಿಸಿಕೊಂಡಾಗಿನಿಂದಲೂ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಕ್ಕೆ ಸದಾ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿವೆ. ಇದೀಗ ಮತ್ತೊಂದು ಹಿನ್ನಡೆಯಾಗಿದ್ದು, ಶಿವಸೇನೆ ನಾಯಕ ಸ್ಥಾನಕ್ಕೆ ಮಾಜಿ ಸಚಿವ ರಾಮದಾಸ್ ಕದಂ ರಾಜೀನಾಮೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ಬಣದಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ನಾಯಕನಾಗಿರುವ ರಾಮದಾಸ್ ಕದಂ ರಾಜೀನಾಮೆಯಿಂದ ಮಾಜಿ ಮುಖ್ಯಮಂತ್ರಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮಾಜಿ ಸಚಿವರಾಗಿದ್ದ ರಾಮದಾಸ್ ಕದಂ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಉದ್ಧವ್ ಠಾಕ್ರೆ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಗಾಳಿಗೆ ತೋರಿದ್ದಾರೆಂಬ ಆರೋಪ ಮಾಡಿದ್ದಾರೆ. ಈಗಾಗಲೇ ರಾಮದಾಸ್ ಕದಂ ಅವರ ಪುತ್ರ ಏಕನಾಥ್ ಶಿಂದೆ ನೇತೃತ್ವದ ಬಂಡಾಯ ಬಣದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಾತನಾಡಿದ್ದ ರಾಮದಾಸ್, ನಾನು ಶಿವಸೇನೆಯಲ್ಲಿದ್ದೇನೆ. ಉದ್ಧವ್ ಠಾಕ್ರೆ ಅವರಿಗೆ ಬೆಂಬಲ ಮುಂದುವರೆಸುತ್ತೇನೆಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿರಿ:ಉಪ ರಾಷ್ಟ್ರಪತಿ ಚುನಾವಣೆ: ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ ನಾಮಪತ್ರ ಸಲ್ಲಿಕೆ
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದ ಏಕನಾಥ್ ಶಿಂದೆ ಬಳಗ ಈಗಾಗಲೇ ಭಾರತೀಯ ಜನತಾ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡಿದೆ.