ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ತನ್ನದೇ ಆದ ಪ್ರಾಬಲ್ಯ ಮತ್ತು ವರ್ಚಸ್ಸು ಹೊಂದಿರುವ ಶಿವಸೇನೆ ಇದೀಗ ಎರಡು ಬಣಗಳಾಗಿ ಬೇರ್ಪಟ್ಟಿದೆ. ಅಲ್ಲದೇ, 56 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದ ಬಿರುಕು ಬಿಟ್ಟಿದೆ. ಬಣ ರಾಜಕೀಯ ಶಿವಸೈನಿಕರ ಗುರು ಪೂರ್ಣಿಮೆಯ ಸಂಭ್ರಮವನ್ನೂ ಕಸಿದುಕೊಂಡಿದೆ.
ಹೌದು, ಪ್ರತಿ ವರ್ಷ ಗುರುಪೂರ್ಣಿಮೆಯಂದು ಸಾವಿರಾರು ಶಿವಸೈನಿಕರು ಬಾಳಾಸಾಹೇಬ್ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. ಅಲ್ಲದೇ, ಬಾಳಾಸಾಹೇಬ್ ಠಾಕ್ರೆ ನಿವಾಸವಾಗಿದ್ದ ಈಗ ಉದ್ಧವ್ ಠಾಕ್ರೆ ವಾಸಿಸಿರುವ 'ಮಾತೋಶ್ರೀ'ಗೆ ದೇವಸ್ಥಾನ ಎಂಬ ಭಾವನೆಯಲ್ಲೇ ಭೇಟಿ ನೀಡುತ್ತಿದ್ದರು. ಆದರೆ, ರಾಜಕೀಯದ ಪರಿಣಾಮ ಶಿವಸೇನೆಯಲ್ಲಿ ದೊಡ್ಡ ಒಡಕು ಉಂಟಾಗಿದೆ. ಅರ್ಧದಷ್ಟು ಹಾಲಿ ಶಾಸಕರು ಪಕ್ಷದ ವಿರುದ್ಧವೇ ಸೆಟೆದೆದ್ದು ನಿಂತಿದ್ದಾರೆ. ಹೀಗಾಗಿ 'ಮಾತೋಶ್ರೀ'ಯತ್ತ ಬಂಡಾಯ ಶಾಸಕರು ಮುಖ ಮಾಡಿಲ್ಲ.
ಸ್ಮಾರಕಕ್ಕೆ ಬಂಡಾಯ ಶಾಸಕರ ಗುಂಪು:ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿ ಮುಖ್ಯಮಂತ್ರಿ ಗದ್ದುಗೆ ಏರಿರುವ ಏಕನಾಥ್ ಶಿಂಧೆ ಮತ್ತು ಅವರ ಗುಂಪು ದಾದರ್‌ನಲ್ಲಿರುವ ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿದೆ. ಗುರುಪೂರ್ಣಿಮೆ ನಿಮಿತ್ತ 50 ಶಾಸಕರು ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದಾರೆ. ಶಾಸಕರಾದ ಸಂಜಯ ಶಿರ್ಸಾತ್, ಪ್ರಕಾಶ ಸುರ್ವೆ, ಯಾಮಿನಿ ಜಾಧವ್, ಡಾ.ಬಾಲಾಜಿ ಕಿಣಿಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಠಾಕ್ರೆ ಗುಂಪಿನಿಂದ ಯಾರು?: ಶಿಂಧೆ ಗುಂಪಿನಂತೆಯೇ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸುವ ಶಾಸಕರ ಪರಿಸ್ಥಿತಿಯಂತೆಯೇ ಇತ್ತು. ಈ ಶಾಸಕರು ಪ್ರತ್ಯೇಕವಾಗಿ ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನಂತರ 'ಮಾತೋಶ್ರೀ'ಗೆ ತೆರಳಿ ಉದ್ಧವ್ ಠಾಕ್ರೆ ಅವರಿಗೆ ಶುಭಾಶಯ ಕೋರಿದರು. ಆದರೆ, ಏಕನಾಥ್ ಶಿಂಧೆ ಗುಂಪಿನ ಯಾವೊಬ್ಬ ಬಂಡಾಯ ಶಾಸಕ ಕೂಡ 'ಮಾತೋಶ್ರೀ' ಕಡೆ ತಲೆ ಹಾಕಲಿಲ್ಲ.