ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸ್ ಪಠಣೆ ಮಾಡುವುದಾಗಿ ಘೋಷಿಸಿ, ಇದೀಗ ಬಂಧನಕ್ಕೊಳಗಾಗಿರುವ ಸಂಸದೆ ನವನೀತ್ ಕೌರ್ ಹಾಗೂ ಪತಿ ರವಿ ರಾಣಾ ಅವರಿಗೆ ಜೈಲಿನೊಳಗೆ ಹಾಕಲಾಗಿದೆ. ಇದರ ಮಧ್ಯೆ ಸಂಸದೆ ಕೌರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸಾರ್ವಜನಿಕರಿಗೆ ದ್ರೋಹ ಎಸಗುತ್ತಿದ್ದು, ಕಾಂಗ್ರೆಸ್ - ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ತನ್ನ ಹಿಂದುತ್ವ ತತ್ವಗಳಿಂದ ಸಂಪೂರ್ಣವಾಗಿ ದೂರ ಸರಿದಿದೆ ಎಂಬುದು ನನ್ನ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ನಂಬಿಕೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಇದೀಗ ಸಾರ್ವಜನಿಕರಿಗೆ ದ್ರೋಹ ಮಾಡ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಿದ ನಂತರ ದಂಪತಿಯನ್ನು ಶನಿವಾರ ಪೊಲೀಸರು ಬಂಧನ ಮಾಡಿದ್ದರು. ಇದರ ಬೆನ್ನಲ್ಲೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಅಮರಾವತಿ ಸಂಸದೆ ನವನೀತ್ ರಾಣಾ ಅವರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಿದರೆ, ಅವರ ಪತಿ ಶಾಸಕ ರವಿ ರಾಣಾ ಅವರನ್ನು ನವಿ ಮುಂಬೈನ ತಲೋಜಾ ಜೈಲಿಗೆ ಕರೆದೊಯ್ಯಲಾಗಿದೆ.