ಮುಂಬೈ: ಮಹಾ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಂತಿದೆ. ಎನ್ಸಿಪಿ-ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರ ರಚಿಸಿರುವ ಶಿವಸೇನೆಗೆ ಇದೀಗ ಇರುಸು-ಮುರುಸು ಉಂಟಾಗುವಂತ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಹೇಳಿರುವುದು ಸಿಎಂ ಉದ್ಧವ್ ಠಾಕ್ರೆ ಅವರ ಕಣ್ಣನ್ನು ಕೆಂಪಾಗಿಸಿದೆ.
ಹೌದು, ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಮಾಧ್ಯಮಗಳಿಗೆ ನೀಡಿರುವ ಸಾರ್ವಜನಿಕ ಹೇಳಿಕೆಯಿಂದ ಈಗ ಶಿವಸೇನೆ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಸೇನೆ ವಾರ್ಷಿಕೋತ್ಸವದಂದು ಪಕ್ಷದ ಎಲ್ಲಾ ಕಾರ್ಯಕರ್ತರನ್ನ ಉದ್ದೇಶಿಸಿ ಉದ್ಧವ್ ಠಾಕ್ರೆ ವರ್ಚುವಲ್ ಮೂಲಕ ಮಾತನಾಡಿದ್ರು.
ಈ ವೇಳೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಕಾಂಗ್ರೆಸ್ ವಿರುದ್ಧ ಠಾಕ್ರೆ ವಾಗ್ದಾಳಿ ನಡೆಸಿದ್ರು. ಹಲವರು ಸ್ವಾವಲಂಬಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಏಕಾಂಗಿ ಅಥವಾ ಸ್ವಾವಲಂಬನೆ ಎಂದರೆ ಚುನಾವಣೆಗಳಲ್ಲಿ ಮಾತ್ರ ಹೋರಾಡುವುದು ಎಂದಲ್ಲ. ಕೊರೊನಾ ಬಿಕ್ಕಟ್ಟಿನಲ್ಲಿ ನೀವು ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಬಯಸಿದರೆ, ಜನರು ನಿಮ್ಮನ್ನು ಸೋಲಿಸುತ್ತಾರೆ ಎಂದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ. ಇದೇ ವೇಳೆ ನಾವು ಯಾರ ಪಲ್ಲಕ್ಕಿಯನ್ನು ಒಯ್ಯುವುದಿಲ್ಲ. ಅಧಿಕಾರಕ್ಕಾಗಿ ಅಸಹಾಯಕರಾಗುವುದಿಲ್ಲ ಎಂದೂ ಹೇಳಿದ್ದಾರೆ.
ಮೊದಲು ಕತ್ತಿಯನ್ನು ಎತ್ತುವ ಶಕ್ತಿಯನ್ನು ಪಡೆದುಕೊಳ್ಳಿ, ನಂತರ ಹೊಡೆಯಿರಿ. ಇದು ನನ್ನ ಶಕ್ತಿ. ಚುನಾವಣೆ ನಡೆಯುತ್ತದೆ. ಗೆಲ್ಲದೇ ಹೋಗಬಹುದು ಆದರೆ ಸೋತವರ ಮನಸ್ಥಿತಿ ಸೋತ ನಂತರ ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದರು. ಮುಂದುವರಿದು "ನಾವು ಹರಿದ ಬೂಟುಗಳನ್ನು ಧರಿಸುತ್ತೇವೆ, ಆದರೆ ನಾವು ನಮ್ಮ ಕಾಲುಗಳ ಮೇಲೆ ದೃಢವಾಗಿ ನಿಲ್ಲುತ್ತೇವೆ" ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದರು.