ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಗ್ಗೆ ವಿವಾದಿತ ಹೇಳಿಕೆ ನೀಡಿ ಬಂಧನಕ್ಕೊಳಗಾಗಿ, ಬಿಡುಗಡೆ ಆಗಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಪ್ರಕರಣ ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲೂ ಎರಡು ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ.
ನಾರಾಯಣ್ ರಾಣೆ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಅವರ ಮಗ, ಶಾಸಕ ನಿತೀಶ್ ರಾಣೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಶಿವಸೇನೆಗೆ ವಾರ್ನ್ ಮಾಡಿರುವ ರೀತಿಯಲ್ಲಿರುವ ವಿಡಿಯೋ ಹಾಕಿದ್ದಾರೆ. 23 ಸೆಕೆಂಡ್ಗಳ ಈ ವಿಡಿಯೋ 'ರಾಜನೀತಿ' ಸಿನಿಮಾದ ತುಣುಕಾಗಿದೆ. ಇದರಲ್ಲಿ ನಟ ಮನೋಜ್ ವಾಜಪೇಯಿ 'ಸರಿಯಾದ ಪ್ರತ್ಯುತ್ತರ ಸಿಗಲಿದೆ' ಎಂದು ಹೇಳಿರುವ ಡೈಲಾಗ್ ಇದೆ.
ಇದಕ್ಕೆ ಟ್ವಿಟರ್ ಮೂಲಕವೇ ತಿರುಗೇಟು ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, ನಿತೀಶ್ ರಾಣೆ ಟಾರ್ಗೆಟ್ ಮಾಡಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಹುಲಿ ತನ್ನ ಬಾಯಲ್ಲಿ ಕೋಳಿ ಹಿಡಿದುಕೊಂಡಿದೆ. ಇದರ ಮಧ್ಯೆ ಎರಡು ಪಕ್ಷದ ಕಾರ್ಯಕರ್ತರು ಜಟಾಪಟಿ ನಡೆಸುತ್ತಿರುವ ಘಟನೆ ಕೂಡ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಕೇಂದ್ರ ಸಚಿವ ನಾರಾಯಣ್ ರಾಣೆಗೆ ಈಗಾಗಲೇ ಕೋರ್ಟ್ನಿಂದ ಜಾಮೀನು ಸಿಕ್ಕಿದ್ದು, ಮುಂದಿನ ಆದೇಶದವರೆಗೆ ಅವರ ವಿರುದ್ಧ ಮುಂಬೈ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ.