ಮುಂಬೈ(ಮಹಾರಾಷ್ಟ್ರ):ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತರಾಗಿದ್ದ ಏಕನಾಥ್ ಶಿಂಧೆ ಅವರ ಬಂಡಾಯವು ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಅಡ್ಡಿಯಾಗಿದೆ. ಮಹಾರಾಷ್ಟ್ರದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ. ಮಹಾರಾಷ್ಟ್ರ ರಾಜಕೀಯ ಭಾರಿ ಸದ್ದು ಮಾಡುತ್ತಿದ್ದು, ಕ್ರಿಯೆಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ರಾವುತ್ ಎಚ್ಚರಿಕೆ:ಪಕ್ಷದ ನೆಲೆಯನ್ನು ವಿಸ್ತರಿಸಲು ಬಹು ದೊಡ್ಡ ಅವಕಾಶವಿದೆ. ಪಕ್ಷವನ್ನು ಹೈಜಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಇಂದು ಹೇಳಿದ್ದಾರೆ. ಏಕನಾಥ್ ಶಿಂಧೆ ಅವರ ಬಂಡಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವುತ್, ಶಿವಸೇನೆ ಕಾರ್ಯಕರ್ತರು ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಂದ ಸಂತಸಗೊಂಡಿಲ್ಲ ಮತ್ತು ಹೈಕಮಾಂಡ್‌ನ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಶಿವಸೇನೆ ಸಂಸದ ಸಂಜಯ್ ರಾವುತ್ ಹಣ ಕೊಟ್ಟು ಪಕ್ಷವನ್ನು ಯಾರೂ ಖರೀದಿಸಲು ಸಾಧ್ಯವಿಲ್ಲವೆಂದು ಕೂಡ ಹೇಳಿದ್ದಾರೆ. ಇದು ಬಾಳಾಸಾಹೇಬರ ಶಿವಸೇನೆ. ಸಾವಿರಾರು ಲಕ್ಷ ಶಿವಸೈನಿಕರ ಬಲಿದಾನದಿಂದ ಶಿವಸೇನೆ ಇಂದು ಬೆಳೆದು ನಿಂತಿದೆ. ಪಕ್ಷವು ಒಗ್ಗಟ್ಟಾಗಿದೆ ಮತ್ತು ಬಲಿಷ್ಠವಾಗಿದೆ ಎಂದು ಹೇಳಿದರು.
ಸುರಕ್ಷತೆಯ ಜವಾಬ್ದಾರಿಯನ್ನು ಪಕ್ಷ ಹೊಂದಿಲ್ಲ:ಬಂಡಾಯ ಶಾಸಕರ ಬಗ್ಗೆ ಮಾತನಾಡಿದ ರಾವುತ್, ಅವರು ಪ್ರಸ್ತುತ ಮಹಾರಾಷ್ಟ್ರದ ಹೊರಗಿದ್ದಾರೆ ಮತ್ತು ಅವರ ಸುರಕ್ಷತೆಯ ಜವಾಬ್ದಾರಿಯನ್ನು ಪಕ್ಷ ಹೊಂದಿಲ್ಲ ಎಂದರು. ಇನ್ನೂ ಮಹಾರಾಷ್ಟ್ರದ ಮಾಜಿ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಗ್ಗೆ ಮಾತನಾಡಿ, ಫಡ್ನವೀಸ್ ಈ ಗೊಂದಲದಲ್ಲಿ ಬೀಳಬಾರದು, ಇದರಿಂದ ಅವರ ಪ್ರತಿಷ್ಠೆಗೆ ಅಪಾಯವಿದೆ ಎಂದರು.
ಬಂಡಾಯ ಶಾಸಕನ ಕಚೇರಿ ಧ್ವಂಸ:ಅತ್ತ ರಾವುತ್ ಎಚ್ಚರಿಕೆ ನೀಡುತ್ತಿದ್ದರೆ, ಇತ್ತ ಬಂಡಾಯ ಶಾಸಕರ ಮನೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ಏಕನಾಥ್ ಶಿಂಧೆ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ತಾಪ ಏರಿದೆ. ಶಿವಸೇನೆಯ 40ಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ್ದಾರೆ. ಪರಿಣಾಮ ಶಿವಸೇನೆ ಕಾರ್ಯಕರ್ತರು ಏಕನಾಥ್ ಶಿಂಧೆ ವಿರುದ್ಧ ಕೋಪಗೊಂಡಿದ್ದಾರೆ. ಇದೀಗ ಪುಣೆಯಲ್ಲಿರುವ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.
ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಧ್ವಂಸಗೊಳಿಸಿದ ಶಿವಸೇನೆ ಕಾರ್ಯಕರ್ತರು ರಾವುತ್ ಕಾರ್ಯಕರ್ತರು ಬೀದಿಗಿಳಿಯುವಂತೆ ಕರೆ ನೀಡಿಲ್ಲ ಎಂಬ ಪರೋಕ್ಷ ಎಚ್ಚರಿಕೆ ರವಾನಿಸಿದ್ದರ ಬೆನ್ನಲ್ಲೇ ಬಂಡಾಯ ಶಾಸಕರ ಮನೆಗಳ ಮೇಲೆ ದಾಳಿ ನಡೆದಿರುವುದು ಬರೀ ಕಾಕತಾಳಿಯವೋ, ಇಲ್ಲವೇ ಉದ್ದೇಶ ಪೂರ್ವಕವೇ ಗೊತ್ತಿಲ್ಲ.
ಇದನ್ನೂ ಓದಿ:ಹಿಂದುತ್ವದ ಪರವಾದ ಯಾವುದೇ ಪಕ್ಷ ಬಿಜೆಪಿಗೆ ಬೇಕಾಗಿಲ್ಲ: ಉದ್ಧವ್ ಠಾಕ್ರೆ ಆರೋಪ