ನವದೆಹಲಿ: ಚುನಾವಣಾ ಆಯೋಗವು ಶಿವಸೇನೆ ಹೆಸರು ಮತ್ತು ಬಿಲ್ಲು - ಬಾಣ ಪಕ್ಷದ ಲಾಂಛನ ನೀಡಿದ ನಾಲ್ಕು ದಿನಗಳ ನಂತರ ಶಿವಸೇನಾ ಏಕನಾಥ್ ಶಿಂಧೆ ಬಣದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಇಂದು ಸಂಜೆ ನಡೆಯಲಿದೆ. ಶಿಂಧೆ ಗುಂಪಿಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡುವ ಚುನಾವಣಾ ಆಯೋಗದ ನಿರ್ಧಾರ ರದ್ದುಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿರುವುದು ಇಲ್ಲಿ ಗಮನಾರ್ಹ.
ಮಾಧ್ಯಮ ವರದಿಗಳ ಪ್ರಕಾರ, ಇಂದು ಸಂಜೆ ನಡೆಯುವ ಸೇನಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶಿಂಧೆ ಅವರು ಹೊಸ ಸ್ಥಳೀಯ ಮಟ್ಟದ ಪದಾಧಿಕಾರಿಗಳ ನೇಮಕ ಮಾಡುವ ನಿರೀಕ್ಷೆಯಿದೆ. ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ಮುಖಂಡ ದೀಪಕ್ ಕೇಸರ್ಕರ್, ಭಾರತೀಯ ಚುನಾವಣಾ ಆಯೋಗದ ಆದೇಶದ ನಂತರ ಶಿವಸೇನೆಯ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದು ಸಂಜೆ ನಡೆಯಲಿದೆ. ಇಂದು ಕೆಲವು ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಬಹುದು ಎಂದು ಹೇಳಿದರು.
ತಮ್ಮ ಪಕ್ಷದ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ನಿರಂತರ ವಾಗ್ದಾಳಿ ಮತ್ತು ಪಕ್ಷದ ಬೆಂಬಲಿಗರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನಗಳ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಶಕ್ತಿ ಮತ್ತು ಬೆಂಬಲದ ನೆಲೆಯನ್ನು ನಿರ್ಣಯಿಸಬೇಕಾಗಿರುವುದರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಬಣದ ಇಂದಿನ ಸಭೆ ಮಹತ್ವದ್ದಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮುಂದುವರೆದಿರುವ ಮಧ್ಯೆ ಉದ್ಧವ್ ಠಾಕ್ರೆ ಅವರು ಶಿವ ಸೈನಿಕ ಶಿಬಿರಗಳಲ್ಲಿ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಪಕ್ಷದ ಕಾರ್ಯಕರ್ತರು ತಮಗೆ ನಿಷ್ಠರಾಗಿರುವಂತೆ ಮಾಡುತ್ತಿದ್ದಾರೆ.
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರು ಪಕ್ಷದ ಕಾರ್ಯಕರ್ತರ ನಿಷ್ಠೆಯನ್ನು ಕಾಪಾಡಿಕೊಳ್ಳಲು ಮತ್ತು ಪಕ್ಷದ ಆಸ್ತಿಯ ಮೇಲೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಶಿವಸೇನೆ ಹೆಸರು ಮತ್ತು ಚಿಹ್ನೆಯ ವಿಷಯಕ್ಕೆ ಸಂಬಂಧಿಸಿದ ಎರಡೂ ಬಣಗಳ ಮಧ್ಯೆ ತಿಕ್ಕಾಟ ಇನ್ನಷ್ಟು ಜೋರಾಗುವ ಸಾಧ್ಯತೆಗಳಿವೆ. ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಘೋಷಿಸಿದ ಕೆಲವು ದಿನಗಳ ನಂತರ ಮತ್ತು ಪಕ್ಷದ 'ಬಿಲ್ಲು-ಬಾಣ' ' ಚಿಹ್ನೆಯನ್ನು ಅದಕ್ಕೆ ನೀಡಿದ ನಂತರ, ಶಿವಸೇನೆಯ ವೆಬ್‌ಸೈಟ್ ಅನ್ನು ಸೋಮವಾರ (ಫೆಬ್ರವರಿ 20, 2023) ಡಿಲೀಟ್ ಮಾಡಲಾಗಿದೆ ಮತ್ತು ಅದರ ಅಧಿಕೃತ ಟ್ವಿಟರ್ ಖಾತೆಯ ಹೆಸರನ್ನು ಬದಲಾಯಿಸಲಾಗಿದೆ.