ಕರ್ನಾಟಕ

karnataka

ETV Bharat / bharat

ಶಿಂಧೆ ಬಣವೇ ನಿಜವಾದ ಶಿವಸೇನೆ, 16 ಶಾಸಕರ ಸದಸ್ಯತ್ವ ಸಿಂಧು: ಮಹಾರಾಷ್ಟ್ರ ಸ್ಪೀಕರ್ ತೀರ್ಪು - ಮಹಾರಾಷ್ಟ್ರ ಸ್ಪೀಕರ್

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವೇ ನಿಜವಾದ ರಾಜಕೀಯ ಪಕ್ಷ ಎಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಆದೇಶ ನೀಡಿದ್ದಾರೆ.

Shinde faction of Sena was real political party when factions emerged: Maharashtra Speaker
ಶಿಂಧೆ ಬಣವೇ ನಿಜವಾದ ಶಿವಸೇನೆ, 16 ಶಾಸಕರ ಸದಸ್ಯತ್ವ ಸಿಂಧು: ಮಹಾರಾಷ್ಟ್ರ ಸ್ಪೀಕರ್ ತೀರ್ಪು

By ETV Bharat Karnataka Team

Published : Jan 10, 2024, 6:43 PM IST

Updated : Jan 10, 2024, 7:17 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 16 ಶಾಸಕರ ಸದಸ್ಯತ್ವ ಸಿಂಧು ಎಂದು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಬುಧವಾರ ಪ್ರಕಟಿಸಿದ್ದಾರೆ. 2022ರಲ್ಲಿ ಎರಡು ಬಣಗಳು ಹುಟ್ಟಿಕೊಂಡಾಗ ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ರಾಜಕೀಯ ಪಕ್ಷ ಎಂದು ಆದೇಶ ನೀಡಿದ್ದಾರೆ.

2019ರ ನವೆಂಬರ್​ನಲ್ಲಿ ವಿಧಾನಸಭಾ ಚುನಾವಣೆಯ ನಂತರದಿಂದ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಮಹಾರಾಷ್ಟ್ರ ಕಾರಣವಾಗಿದೆ. ಅಧಿಕಾರ ಹಂಚಿಕೆ ವಿಷಯವಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ದೀರ್ಘಕಾಲದ ಮಿತ್ರಪಕ್ಷ ಬಿಜೆಪಿಯೊಂದಿಗೆ ಸಂಬಂಧ ಮುರಿದುಕೊಂಡಿತ್ತು. ನಂತರ ರಾಜಭವನದಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಮತ್ತು ಎನ್​ಸಿಪಿಯ ಅಜಿತ್ ಪವಾರ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಈ ಸರ್ಕಾರವು ಕೇವಲ 80 ಗಂಟೆಗಳಲ್ಲಿ ಪತನವಾಗಿತ್ತು.

ಇದಾದ ತಿಂಗಳಲ್ಲಿ ಎನ್‌ಸಿಪಿ, ಕಾಂಗ್ರೆಸ್‌, ಶಿವಸೇನೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡಿದ್ದವು. ಆಗ ಉದ್ಧವ್ ಠಾಕ್ರೆ ಸಿಎಂ ಆಗಿ ಆಯ್ಕೆಯಾಗಿದ್ದರು. ಆದರೆ, 2022ರಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ 40 ಶಾಸಕರು ಬಂಡಾಯ ಎದ್ದಿದ್ದರು. ಇದರಿಂದ ಉದ್ಧವ್ ಠಾಕ್ರೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜೊತೆಗೆ ಶಿವಸೇನೆ ಪಕ್ಷ ಶಿಂಧೆ ಹಾಗೂ ಉದ್ಧವ್ ಬಣಗಳಾಗಿ ಇಬ್ಭಾಗವಾಗಿತ್ತು.

ಆಗ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಪ್ರತಿಸ್ಪರ್ಧಿ ಬಣವು ಪರಸ್ಪರರ ಶಾಸಕರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಸಲ್ಲಿಸಿದ್ದರು. ಏಕನಾಥ್ ಶಿಂಧೆ ಬಣದ 16 ಶಾಸಕರ ಅನರ್ಹತೆಗೆ ಉದ್ಧವ್ ಬಣ ಒತ್ತಾಯಿಸಿತ್ತು. ಈ ಅರ್ಜಿ ಸುಪ್ರೀಕೋರ್ಟ್​ಗೂ ಹೋಗಿತ್ತು. 2023ರ ಸೆಪ್ಟೆಂಬರ್​ನಲ್ಲಿ ಅನರ್ಹತೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂಕೋರ್ಟ್​ ಸ್ಪೀಕರ್​ಗೆ ಸೂಚಿಸಿತ್ತು.

ಅಂತೆಯೇ, ಹಲವು ದಿನಗಳಿಂದ ಅರ್ಜಿ ವಿಚಾರಣೆ ನಡೆಸಿದ ಸ್ಪೀಕರ್ ರಾಹುಲ್ ನಾರ್ವೇಕರ್ ಇಂದು ತಮ್ಮ ತೀರ್ಪು ಪ್ರಕಟಿಸಿದ್ದಾರೆ. ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಶಿವಸೇನೆಯ ಉದ್ಧವ್ ಬಣದ ಸುನಿಲ್ ಪ್ರಭು 2022ರ ಜೂನ್ 21ರಿಂದಲೂ ವಿಪ್ ಹುದ್ದೆಯನ್ನು ನಿರ್ವಹಿಸುತ್ತಿಲ್ಲ. ಶಿಂಧೆ ಬಣದ ಭರತ್ ಗೊಗವಾಲೆ ಅಧಿಕೃತ ವಿಪ್ ಆಗಿದ್ದಾರೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಯಾವುದೇ ನಾಯಕನನ್ನು ಪಕ್ಷದಿಂದ ತೆಗೆದುಹಾಕುವ ಅಧಿಕಾರ ಶಿವಸೇನೆ ಪ್ರಮಖರಿಗೆ ಇಲ್ಲ ಎಂದು ಹೇಳಿರುವ ಸ್ಪೀಕರ್, ಪಕ್ಷದ ಅಧ್ಯಕ್ಷರ ಇಚ್ಛೆ ಮತ್ತು ಪಕ್ಷದ ಇಚ್ಛೆ ಒಂದೇ ಎಂಬ ವಾದವನ್ನೂ ತಳ್ಳಿಹಾಕಿದ್ದಾರೆ. ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಸ್ಪೀಕರ್ ಆದೇಶಿಸಿದ ಬೆನ್ನಲ್ಲೇ ಶಿಂಧೆ ಬಣದಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನಲ್ಲಿರುವ ಶಿವಸೇನೆ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ:ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು

Last Updated : Jan 10, 2024, 7:17 PM IST

ABOUT THE AUTHOR

...view details